ಬೆಂಗಳೂರು:ವಂಚನೆ ಮಾಡಿರುವ 65 ಕಂಪನಿಗಳ 137 ಕೋಟಿ ರೂ. ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ವಂಚನೆ ಮಾಡಿರುವ 65 ಕಂಪನಿಗಳ 137 ಕೋಟಿ ರೂ. ಆಸ್ತಿ ಮುಟ್ಟುಗೋಲು: ಸಚಿವ ಆರ್.ಅಶೋಕ್ ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಣ್ವ ಕೋ-ಆಪರೇಟಿವ್, ಆರ್.ಆರ್. ವೆಂಚರ್ಸ್, ಇನೋವೇಟಿವ್ ಬ್ಯುಸಿನೆಸ್, ದಿವ್ಯಸ್ಪಂದನ ಕೋ ಆಪರೇಟಿವ್, ಲೋಕಮಾನ್ಯ ಕೋ ಆಪರೇಟಿವ್ ಹಾಗೂ ಐಎಂಎ ಕಂಪನಿ ಸೇರಿ 65 ಕಂಪನಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದರು.
ಪ್ರತಿಯೊಂದು ಹಳ್ಳಿಯಲ್ಲೂ ಸ್ಮಶಾನದ ವ್ಯವಸ್ಥೆ ಮಾಡಲಾಗುವುದು. ದಾಸನಪುರದಲ್ಲಿ 2 ಎಕರೆ, ಉತ್ತರಹಳ್ಳಿಯಲ್ಲಿ 4 ಎಕರೆ, ಜಿಗಣಿಯಲ್ಲಿ 3, ಸರ್ಜಾಪುರದಲ್ಲಿ 4, ದೊಡ್ಡಜಾಲದಲ್ಲಿ1.20 ಎಕರೆ, ಹುಣಸೂರಿನಲ್ಲಿ ಒಂದು ಎಕರೆ ಜಾಗ ಗುರುತಿಸಿದ್ದೇವೆ. ಕೋವಿಡ್ನಿಂದ ಮೃತಪಟ್ಟರೆ ಸರ್ವ ಧರ್ಮಕ್ಕೂ ಒಂದೇ ಕಡೆ ಶವಸಂಸ್ಕಾರ ಮಾಡಲಾಗುತ್ತದೆ. ಈ ಹಿಂದೆ ಕೊರೊನಾದಿಂದ ಮೃತಪಟ್ಟರೆ 250 ರೂ.ಶುಲ್ಕ ಕಟ್ಟಬೇಕಿತ್ತು, ಇಂದಿನಿಂದಲೇ ಶುಲ್ಕ ವಿನಾಯಿತಿ ನೀಡಲಾಗುವುದು. ಬೂದಿ ಸಂಗ್ರಹದ 100 ರೂಪಾಯಿಯನ್ನು ಸರ್ಕಾರ ಭರಿಸುತ್ತದೆ. ಚಟ್ಟ ಕಟ್ಟೋಕೆ ಇದ್ದ 900 ರೂ. ಶುಲ್ಕಕ್ಕೂ ವಿನಾಯಿತಿ ನೀಡಲಾಗುತ್ತದೆ. ಇದು ಕೊರೊನಾ ಸೋಂಕಿನಿಂದ ಮೃತಪಟ್ಟ ಶವಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದರು. ಇನ್ನು, ಸಿನಿಮಾ ಚಿತ್ರೀಕರಣ, ಸಿನಿಮಾ ಪ್ರದರ್ಶನ ಇತ್ಯಾದಿಗಳಿಗೆ ಕೇಂದ್ರ ಸರ್ಕಾರ ಅವಕಾಶಕೊಟ್ಟರೆ, ರಾಜ್ಯ ಸರ್ಕಾರ ಕೂಡ ಪರಿಶೀಲಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದೆ ಎಂದರು.
ಭೂ ಸುಧಾರಣಾ ತಿದ್ದುಪಡಿ ಕಾಯ್ದೆಗೆ ಕಾಂಗ್ರೆಸ್ ವಿರೋಧ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ನವರ ಹೋರಾಟಕ್ಕೆ ನಮ್ಮ ಸಹಕಾರವೂ ಇದೆ. ಪ್ರತಿಪಕ್ಷ ಅಂದರೆ ಸುಮ್ಮನೆ ಇರುವುದಕ್ಕೆ ಆಗುತ್ತಾ? ಅವರು ಪ್ರತಿಭಟನೆ ಮಾಡಲೇಬೇಕು. ದೇವರಾಜ ಅರಸರ ಕಾಯ್ದೆ ಅವರಿಗೆ ಇಷ್ಟ, ನಮಗೆ ಯಡಿಯೂರಪ್ಪ ಕಾಯ್ದೆ ಬೇಕಷ್ಟೇ. ಸಿದ್ದರಾಮಯ್ಯನವರಿಗೆ ವ್ಯವಸಾಯ ಗೊತ್ತಿದ್ದರೆ, ನಮಗೂ ಗೊತ್ತಿದೆ. ಅವರಿಗೆ ಗೊತ್ತಿಲ್ಲ ಅಂದರೆ ನನಗೆ ಗೊತ್ತಿಲ್ಲ. ಗಾಣಿಗರಹಳ್ಳಿಗೆ ನಾನು ದನ ಮೇಯಿಸಲು ಹೋಗುತ್ತಿದ್ದೆ. ರೈತಾಪಿ ಬಿಟ್ಟು 40 ವರ್ಷ ಆಗಿದೆ. ಆದರೂ ನಾನು ರೈತ ಅನ್ನುತ್ತಲೇ ಇದ್ದಾರೆ ಎಂದು ವ್ಯಂಗ್ಯವಾಡಿದರು.
ಬೇರೆ ಬೇರೆ ರಾಜ್ಯಗಳ ಕಾಂಗ್ರೆಸ್ ಮುಖ್ಯಮಂತ್ರಿಗಳು ಈ ಕಾಯ್ದೆಯನ್ನು ತೆಗೆದಿದ್ದಾರೆ. ಅವರಿಗೆ ಕೋಚಿಂಗ್ ಕೊಡಿ. ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಬಗ್ಗೆ ಅಧ್ಯಕ್ಷರೇ ಮಾತನಾಡುತ್ತಿಲ್ಲ. ಕಾಂಗ್ರೆಸ್ನಲ್ಲಿ ಅಧ್ಯಕ್ಷರು ಮೊದಲಾ, ಪ್ರತಿಪಕ್ಷದ ನಾಯಕರು ಮೊದಲಾ ಎಂಬ ವಾದ ನಡೆಯುತ್ತಲೇ ಇದೆ. ನಮಗೆ ಯಡಿಯೂರಪ್ಪನವರೇ ಈಗಲೂ, ಮುಂದೆಯೂ ನಾಯಕರು. ಸಚಿವರ ನಡುವೆ ಯಾವುದೇ ಅಸಮಧಾನ ಇಲ್ಲ. ನಾವು ಪಂಚಪಾಂಡವರು. ಬಹಳ ವರ್ಷ ಅಧಿಕಾರ ಮಾಡಿದವರು ಎಂದರು.