ಬೆಂಗಳೂರು: ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ (ಕೆಐಎಡಿಬಿ) ಹತ್ತು ವರ್ಷಗಳ ಹಿಂದೆ ನಡೆದಿದ್ದ ಭೂ ಹಗರಣದಲ್ಲಿ ನಿವೃತ್ತ ಕೆಎಎಸ್ ಅಧಿಕಾರಿ ಮತ್ತು ಖಾಸಗಿ ವ್ಯಕ್ತಿಯೊಬ್ಬರಿಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ತಲಾ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ನಿವೃತ್ತ ಕೆಎಎಸ್ ಅಧಿಕಾರಿ ಕೆ.ಬಿ.ಚಿಕ್ಕಬೆಟ್ಟಯ್ಯ ಮತ್ತು ಹೊರಮಾವು ನಿವಾಸಿ ಮುನಿರಾಜು ಶಿಕ್ಷೆಗೊಳಗಾಗಿದ್ದಾರೆ. ಇಬ್ಬರಿಗೂ ಕ್ರಮವಾಗಿ 2.10 ಮತ್ತು 2 ಲಕ್ಷ ರೂ ದಂಡ ವಿಧಿಸಲಾಗಿದೆ. ಬೆಂಗಳೂರು ಉತ್ತರ ತಾಲೂಕಿನ ವ್ಯಾಪ್ತಿಯಲ್ಲಿ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಪಾರ್ಕ್‌ಗಳ ನಿರ್ಮಾಣಕ್ಕೆ ನಡೆದ ಭೂಸ್ವಾಧೀನ ಪ್ರಕ್ರಿಯೆಯಲ್ಲಿನ ಹಗರಣಕ್ಕೆ ಸಂಬಂಧಿಸಿದಂತೆ ಅಪರಾಧಿಗಳಿಗೆ ಶಿಕ್ಷೆಯಾದ ಮೊದಲ ಪ್ರಕರಣವಾಗಿದೆ.
ಕೆಐಎಡಿಬಿ 2006ರಲ್ಲಿ ಬೆಂಗಳೂರು ಉತ್ತರ ತಾಲೂಕಿನ ಅಗೆಭಿನ್ನಮಂಗಲದ ಸರ್ವೆ ನಂಬರ್ 74/2ರಲ್ಲಿ 2 ಎಕರೆ 10 ಗುಂಟೆ ಜಮೀನು ಸ್ವಾಧೀನಪಡಿಸಿಕೊಂಡಿತ್ತು. ಮುನಿಕೃಷ್ಣ ಈ ಜಮೀನಿನ ಮಾಲೀಕರಾಗಿದ್ದು, ಮುನಿರಾಜು ಜಮೀನಿನ ಮಾಲೀಕ ಎಂಬಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಲಾಗಿತ್ತು. ಈ ಆಧಾರದಲ್ಲಿ 1,139 ಕೋಟಿ ಪರಿಹಾರ ಕೂಡ ಪಾವತಿಸಲಾಗಿತ್ತು.