ಬೆಂಗಳೂರು: ನಕಲಿ ಸಹಿ ಮಾಡಿ ಸಲ್ಲಿಸಿರುವ ರಾಜೀನಾಮೆ ಪತ್ರವನ್ನು ಅಂಗೀಕರಿಸಿರುವ ಸರ್ಕಾರದ ಕ್ರಮ ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ರಿಟ್ ಅರ್ಜಿ ವಜಾಗೊಳಿಸಿರುವ ಹೈಕೋರ್ಟ್ ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್ಪಿಸಿಬಿ) ಮಾಜಿ ಅಧ್ಯಕ್ಷ ಡಾ. ಎಂ.ಸುಧೀಂದ್ರರಾವ್ ಸಲ್ಲಿಸಿರುವ ಮೇಲ್ಮನವಿ ಸಂಬಂಧ ಹೈಕೋರ್ಟ್ ವಿಭಾಗೀಯ ಪೀಠ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಈ ಕುರಿತು ಸುಧೀಂದ್ರರಾವ್ ಸಲ್ಲಿಸಿರುವ ಮೇಲ್ಮನವಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ಇಂದು ವಿಚಾರಣೆ ನಡೆಸಿತು. ಕೆಲ ಕಾಲ ವಾದ ಆಲಿಸಿದ ಪೀಠ, ಪ್ರತಿವಾದಿಗಳಾದ ರಾಜ್ಯ ಪರಿಸರ ಇಲಾಖೆ ಕಾರ್ಯದರ್ಶಿ ಹಾಗೂ ಕೆಎಸ್ಪಿಸಿಬಿ ಸದಸ್ಯ ಕಾರ್ಯದರ್ಶಿಗೆ ನೋಟಿಸ್ ಜಾರಿಗೆ ಆದೇಶಿಸಿತು. ಜತೆಗೆ ಸರ್ಕಾರ ಹೊಸದಾಗಿ ನೇಮಿಸಿರುವ ಅಧ್ಯಕ್ಷರ ನೇಮಕಾತಿಯು ಈ ಅರ್ಜಿ ವಿಚಾರಣೆಯ ಅಂತಿಮ ಫಲಿತಾಂಶಕ್ಕೆ ಒಳಪಟ್ಟಿರುತ್ತದೆ ಎಂದು ಆದೇಶಿಸಿ, ವಿಚಾರಣೆಯನ್ನು ಆಗಸ್ಟ್ 17ಕ್ಕೆ ಮುಂದೂಡಿತು.
ಪ್ರಕರಣದ ಹಿನ್ನೆಲೆ:ಸುಧೀಂದ್ರರಾವ್ ಅವರನ್ನು ಸರ್ಕಾರ ಕಳೆದ 2019ರ ಡಿ. 30ರಂದು ಕೆಎಸ್ಪಿಸಿಬಿ ಅಧ್ಯಕ್ಷ ಹುದ್ದೆಗೆ ನಿಯೋಜಿಸಲಾಗಿತ್ತು. ಬಳಿಕ 2020 ಮೇ 2ರಂದು ಸುಧೀಂದ್ರರಾವ್ ಅವರ ರಾಜೀನಾಮೆ ಅಂಗೀಕರಿಸಿ ಹುದ್ದೆಯಿಂದ ಬಿಡುಗಡೆಗೊಳಿಸಲಾಗಿತ್ತು. ಆ ಬಳಿಕ ತಾವು ರಾಜೀನಾಮೆಯನ್ನೇ ನೀಡಿಲ್ಲ. ತಮ್ಮ ಸಹಿಯನ್ನು ನಕಲು ಮಾಡಿ ರಾಜೀನಾಮೆ ಪತ್ರ ಸೃಷ್ಟಿಸಿ ಅದನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗಿದೆ. ಸಿಎಂ ರಾಜೀನಾಮೆ ಅಂಗೀಕರಿಸಲು ಕಾನೂನು ರೀತಿ ಅವಕಾಶವಿಲ್ಲದಿದ್ದರೂ ಅದನ್ನು ಮಾನ್ಯ ಮಾಡಿ ತಮ್ಮನ್ನು ಹುದ್ದೆಯಿಂದ ಬಿಡುಗಡೆ ಮಾಡಿದ್ದಾರೆ ಎಂದು ಆರೋಪಿಸಿದ್ದರು.
ಸರ್ಕಾರದ ಈ ಕ್ರಮ ನಿಯಮ ಬಾಹಿರ ಎಂದು ಆರೋಪಿಸಿದ್ದ ರಾವ್, ಹೈಕೋರ್ಟ್ನಲ್ಲಿ ರಿಟ್ ಅರ್ಜಿ ದಾಖಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠ, ರಾಜೀನಾಮೆ ಪತ್ರದಲ್ಲಿರುವ ಸಹಿ ನಕಲು ಎಂಬ ವಿಚಾರವಾಗಿ ಪೊಲೀಸರು ಬಿ ರಿಪೋರ್ಟ್ ಹಾಕಿದ್ದಾರೆ. ಅಂತೆಯೇ ಸಿಎಂಗೆ ರಾಜೀನಾಮೆ ಅಂಗೀಕರಿಸುವ ಕಾನೂನಾತ್ಮಕ ಅವಕಾಶವಿದೆ ಎಂದು ಅಭಿಪ್ರಾಯಪಟ್ಟು, ಸರ್ಕಾರದ ಕ್ರಮ ಎತ್ತಿಹಿಡಿದು ರಾವ್ ಅವರ ಅರ್ಜಿ ವಜಾಗೊಳಿಸಿತ್ತು. ಇದೀಗ ರಾವ್, ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ, ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ.