ಬೆಂಗಳೂರು:ನಿಯಮ ಉಲ್ಲಂಘಿಸಿ ಕಾರ್ಯ ನಿರ್ವಹಿಸುತ್ತಿರುವ ಲಿಂಗಧೀರನಹಳ್ಳಿಯಲ್ಲಿರುವ ಪಾಲಿಕೆ ಘನತ್ಯಾಜ್ಯ ನಿರ್ವಹಣೆ ಘಟಕದ ವಿರುದ್ಧ, ಬನಶಂಕರಿ 6ನೇ ಹಂತದ ನಿವಾಸಿಗಳು ಪ್ರತಿಭಟನೆ ನಡೆಸಿದರು. ಘನತ್ಯಾಜ್ಯ ನಿರ್ವಹಣೆ ಘಟಕದ ಎದುರು ಪ್ರತಿಭಟನೆ ನಡೆಸಿದ ನಿವಾಸಿಗಳು, ಘಟಕವನ್ನು ತಕ್ಷಣ ಕ್ಲೋಸ್ ಮಾಡಬೇಕು ಎಂದು ಪಾಲಿಕೆ, ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.
2 ತಿಂಗಳ ಹಿಂದೆ ಘಟಕ ಪುನಾರಂಭಗೊಂಡಿದೆ. ಆ ನಂತರ ದುರ್ನಾತದಿಂದಾಗಿ ಉಸಿರಾಡಲು ಕಷ್ಟವಾಗುತ್ತಿದೆ. ನೊಣಗಳ ಕಾಟದಿಂದ ಊಟ ತಿಂಡಿ ಮಾಡಲೂ ಸಹ ಸಾಧ್ಯ ಆಗುತ್ತಿಲ್ಲ, ನರಕಯಾತನೆ ಅನುಭವಿಸುತ್ತಿದ್ದೇವೆ. ಬಿಬಿಎಂಪಿ, ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಸರ್ಕಾರಕ್ಕೆ ನೂರಾರು ಇ-ಮೇಲ್ ಮತ್ತು ಫೋನ್ ಮೂಲಕ ಕಂಪ್ಲೇಂಟ್ ನೀಡಿದರೂ ಪ್ರಯೋಜನವಾಗಿಲ್ಲ. ಯಾವುದೇ ಒಬ್ಬ ಅಧಿಕಾರಿಯಾಗಲಿ ಅಥವಾ ಚುನಾಯಿತ ಜನಪ್ರತಿನಿಧಿಗಳಾಗಲಿ ಈ ಕಡೆ ಮುಖ ಮಾಡಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.