ಕರ್ನಾಟಕ

karnataka

ETV Bharat / city

ಮೇಕೆದಾಟು ಯೋಜನೆ ಶೀಘ್ರ ಅನುಷ್ಠಾನಕ್ಕೆ ಆಗ್ರಹ: ಎಎಪಿ ಉಪವಾಸ ಸತ್ಯಾಗ್ರಹ - Bangalore

ಮೇಕೆದಾಟು ಕಾಮಗಾರಿ ತಕ್ಷಣವೇ ಆರಂಭಿಸಬೇಕು ಎಂದು ಆಗ್ರಹಿಸಿ ಆಮ್‌ ಆದ್ಮಿ ಪಾರ್ಟಿ (ಎಎಪಿ)ಯ ನೂರಾರು ಕಾರ್ಯಕರ್ತರು ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿದರು.

fasting satyagraha
ಎಎಪಿಯಿಂದ ಉಪವಾಸ ಸತ್ಯಾಗ್ರಹ

By

Published : Aug 5, 2021, 10:21 PM IST

ಬೆಂಗಳೂರು:ಮೇಕೆದಾಟು ಕಾಮಗಾರಿಯನ್ನು ತಕ್ಷಣವೇ ಆರಂಭಿಸಿ, ಒಂದು ವರ್ಷದೊಳಗೆ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿ ಆಮ್‌ ಆದ್ಮಿ ಪಾರ್ಟಿ (ಎಎಪಿ)ಯ ನೂರಾರು ಕಾರ್ಯಕರ್ತರು ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಅವರ ನೇತೃತ್ವದಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿದರು.

ಬೆಂಗಳೂರಿನ ಆನಂದ್‌ ಸರ್ಕಲ್‌ ಸಮೀಪದ ಮಹಾತ್ಮ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಉಪವಾಸ ಸತ್ಯಾಗ್ರಹಕ್ಕೆ ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಬೆಂಗಳೂರು ನಗರವು ಅತ್ಯಂತ ವೇಗವಾಗಿ ಬೆಳೆಯುತ್ತಿದೆ. 13 ವರ್ಷಗಳ ಹಿಂದೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಕೇವಲ 100 ವಾರ್ಡ್‌ಗಳಿದ್ದವು. 2007ರಲ್ಲಿ 110 ಹಳ್ಳಿಗಳು ಸೇರಿ ವಾರ್ಡ್‌ಗಳ ಸಂಖ್ಯೆ 198 ತಲುಪಿತು. ಈಗ 45 ವಾರ್ಡ್‌ಗಳನ್ನು ಸೇರಿಸಿ 243 ವಾರ್ಡ್‌ ಮಾಡಲು ಸಿದ್ಧತೆ ನಡೆಯುತ್ತಿದೆ.

ಮೇಕೆದಾಟು ಯೋಜನೆ ಶೀಘ್ರ ಅನುಷ್ಠಾನಕ್ಕೆ ಆಗ್ರಹ..

2007ರಲ್ಲಿ ಸೇರಿದ 110 ವಾರ್ಡ್‌ಗಳಿಗೇ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. ಅಲ್ಲಿನ ಪೈಪ್​​​ಗಳಲ್ಲಿ ನೀರಿನ ಬದಲು ಕೇವಲ ಗಾಳಿ ಬರುತ್ತಿದೆ. ಮೇಕೆದಾಟು ಅಣೆಕಟ್ಟು ನಿರ್ಮಾಣವಾಗದೇ 243 ವಾರ್ಡ್‌ಗಳಿಗೆ ಕುಡಿಯುವ ನೀರು ಪೂರೈಕೆ ಅಸಾಧ್ಯ ಎಂದರು.

ಮೇಕೆದಾಟು ಯೋಜನೆ ಕರ್ನಾಟಕದ ಹಕ್ಕು:

ಬೆಂಗಳೂರನ್ನು ಸ್ಮಾರ್ಟ್‌ ಸಿಟಿ ಮಾಡುತ್ತೇವೆ ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರ ಬೊಗಳೆ ಬಿಡುತ್ತಿದೆ. ಕುಡಿಯುವ ನೀರು ಕೂಡ ಇಲ್ಲದ ನಗರವು ಎಂತಹ ಸ್ಮಾರ್ಟ್‌ ಸಿಟಿ ಆಗಬಹುದು? ಮೇಕೆದಾಟು ಯೋಜನೆಯು ಕರ್ನಾಟಕದ ಹಕ್ಕು. ಇದರ ಜಾರಿಗೆ ಯಾವುದೇ ರೀತಿಯ ಕಾನೂನು ಅಡ್ಡಿಯಿಲ್ಲ.

ವರ್ಷದೊಳಗೆ ಕಾಮಗಾರಿ ಪೂರ್ಣಗೊಳ್ಳಬೇಕು:

ನ್ಯಾಯಮಂಡಳಿಯಿಂದ ತೊಂದರೆಯಿದೆ ಎಂದು ಬಿಜೆಪಿ ನಾಯಕರು ಸುಳ್ಳು ಹೇಳುತ್ತಿದ್ದಾರೆ. ಒಂದು ವರ್ಷದೊಳಗೆ ಪೂರ್ಣಗೊಳ್ಳಬೇಕೆಂಬ ಕಾಲಮಿತಿ ಇಟ್ಟುಕೊಂಡು ಮೇಕೆದಾಟು ಯೋಜನೆಯ ಕಾಮಗಾರಿಗೆ ಕೂಡಲೇ ಗುದ್ದಲಿ ಪೂಜೆ ನೆರವೇರಿಸಬೇಕು ಎಂದು ಪೃಥ್ವಿ ರೆಡ್ಡಿ ಆಗ್ರಹಿಸಿದರು.

ಡಬಲ್‌ ಎಂಜಿನ್‌ ಸರ್ಕಾರಕ್ಕೆ ದನಿ ಎತ್ತುವ ತಾಕತ್ತಿಲ್ಲ:

ಆಮ್‌ ಆದ್ಮಿ ಪಾರ್ಟಿಯ ಬೆಂಗಳೂರು ನಗರದ ಅಧ್ಯಕ್ಷ ಮೋಹನ್‌ ದಾಸರಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಸರ್ಕಾರವಿದ್ದರೆ ಸುವರ್ಣಯುಗ ಆರಂಭವಾಗುತ್ತದೆ ಎಂದು ಹೇಳಿಕೊಂಡು ಬಿಜೆಪಿಯು ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಪಡೆದಿದೆ. ಆದರೆ ಈ ಡಬಲ್‌ ಇಂಜಿನ್‌ ಸರ್ಕಾರಕ್ಕೆ ರಾಜ್ಯದ ಪರವಾಗಿ ದನಿ ಎತ್ತುವ ತಾಕತ್ತಿಲ್ಲ ಎಂದರು.

ವಿನಾಕಾರಣ ವಿವಾದ ಸೃಷ್ಟಿ:

ಮೇಕೆದಾಟು ವಿಚಾರದಲ್ಲಿ ಕೇಂದ್ರ ಸರ್ಕಾರ ತಮಿಳುನಾಡಿನ ಪರವಾಗಿದೆ ಎಂದು ತಮಿಳುನಾಡಿನ ಬಿಜೆಪಿ ಮುಖಂಡರು ಹೇಳುತ್ತಿದ್ದಾರೆ. ಕೇಂದ್ರ ಸರ್ಕಾರವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದರಲ್ಲಿ ರಾಜ್ಯದ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಡಬಲ್‌ ಇಂಜಿನ್‌ ಆಡಳಿತ ನೀಡುವುದಾಗಿ ಹೇಳಿದ್ದ ಬಿಜೆಪಿಯು ಡಬಲ್‌ ಸ್ಟ್ಯಾಂಡರ್ಡ್‌ ಆಡಳಿತ ನೀಡುತ್ತಿದೆ. ತಮಿಳುನಾಡಿನಲ್ಲೇ ಒಂದು ನಿಲುವು, ಕರ್ನಾಟಕದಲ್ಲಿ ಮತ್ತೊಂದು ನಿಲುವು ತೆಗೆದುಕೊಳ್ಳುವ ಮೂಲಕ ವಿನಾಕಾರಣ ವಿವಾದ ಸೃಷ್ಟಿಸುತ್ತಿದೆ ಎಂದು ಕಿಡಿಕಾರಿದರು.

ಎಎಪಿಯ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್‌ ಮಾತನಾಡಿ, ಕಳೆದ 20 ವರ್ಷಗಳಿಂದಲೂ ಕೇಂದ್ರ ಸರ್ಕಾರವು ನೀರಾವರಿ ಯೋಜನೆಗಳಲ್ಲಿ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದೆ. ಇದನ್ನು ವಿರೋಧಿಸಿ ರಾಜ್ಯಕ್ಕೆ ನ್ಯಾಯ ದೊರೆಕಿಸಿಕೊಡಲು ರಾಜ್ಯವನ್ನಾಳಿದ ಎಲ್ಲಾ ಸರ್ಕಾರಗಳು ವಿಫಲವಾಗಿದೆ.

ತಮಿಳುನಾಡಿಗೆ ಯಾವುದೇ ರೀತಿಯ ತೊಂದರೆಯಿಲ್ಲ:

ಮೇಕೆದಾಟು ಯೋಜನೆಯಿಂದ ಕುಡಿಯುವುದಕ್ಕಷ್ಟೇ ನೀರನ್ನು ಬಳಸಿಕೊಳ್ಳಲಾಗುತ್ತದೆ. ಕೃಷಿಗೆ ಆ ನೀರನ್ನು ಬಳಸುವುದಿಲ್ಲ. ಆದ್ದರಿಂದ ತಮಿಳುನಾಡಿಗೆ ಇದರಿಂದ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ. ಅಲ್ಲಿನ ಬಿಜೆಪಿ ಹಾಗೂ ಕಾಂಗ್ರೆಸ್‌ ನಾಯಕರು ವಿನಾಕಾರಣ ಮೇಕೆದಾಟು ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಕರ್ನಾಟಕಕ್ಕೆ ದ್ರೋಹ ಬಗೆಯುತ್ತಿರುವ ಎರಡೂ ಪಕ್ಷಗಳಿಗೆ ರಾಜ್ಯದ ಜನರು ತಕ್ಕ ಪಾಠ ಕಲಿಸಬೇಕಿದೆ ಎಂದು ಹೇಳಿದರು.

ಎಎಪಿಯ ಅನೇಕ ಮುಖಂಡರಾದ ಲಕ್ಷ್ಮೀಕಾಂತ್‌ ರಾವ್‌, ರಾಜಶೇಖರ್‌ ದೊಡ್ಡಣ್ಣ, ಡಾ. ಸತೀಶ್‌, ಜೋತೀಶ್‌ ಕುಮಾರ್‌, ಪ್ರಕಾಶ್‌ ನಾಗರಾಜ್‌, ಉಷಾ ಮೋಹನ್‌, ಸುಹಾಸಿನಿ ಫಣಿರಾಜ್‌ ಹಾಗೂ ನೂರಾರು ಕಾರ್ಯಕರ್ತರು ಉಪವಾಸ ಸತ್ಯಾಗ್ರಹದಲ್ಲಿ ಉಪಸ್ಥಿತರಿದ್ದರು.

ABOUT THE AUTHOR

...view details