ಬೆಂಗಳೂರು :ಇಂದು ಕೇಂದ್ರ ಪಶುಸಂಗೋಪನಾ ಸಚಿವ ಪುರುಷೋತ್ತಮ್ ರೂಪಾಲ ಅವರನ್ನ ದೆಹಲಿಯಲ್ಲಿ ಭೇಟಿ ಮಾಡಿದ ಸಚಿವ ಪ್ರಭು ಚೌಹಾಣ್, ಕರ್ನಾಟಕದಲ್ಲಿ ರಾಷ್ಟ್ರೀಯ ಜಾನುವಾರು ಮಿಷನ್ ಅಡಿಯಲ್ಲಿ ಉದ್ಯೋಗ ಸೃಷ್ಟಿಸಲು ಮನವಿ ಮಾಡಿಕೊಂಡಿದ್ದಾರೆ. ಹೊಸದಾಗಿ ರೂಪಿಸಿರುವ ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಕ್ರಮಕ್ಕೆ ರೂ. 2907 ಕೋಟಿ ನೀಡಲು ಕೇಂದ್ರ ಸಚಿವರಿಗೆ ಮನವಿ ಮಾಡಿದ್ದಾರೆ.
ಕೋಳಿ, ಕುರಿ, ಮೇಕೆ, ಹಂದಿ ಸಾಕಾಣಿಕೆಯಲ್ಲಿ ತೊಡಗಿಸಿಕೊಳ್ಳಬೇಕೆನ್ನುವವರಿಗೆ ಉತ್ತೇಜನ ನೀಡಲು ಈ ಕಾರ್ಯಕ್ರಮ ಸಹಕಾರಿಯಾಗಲಿದೆ. ರಾಜ್ಯದಲ್ಲಿ ಉದ್ಯಮಶೀಲತೆ ಹಾಗೂ ಉದ್ಯೋಗಾವಕಾಶ ಹೆಚ್ಚಿಸುವ ಗುರಿ ಇದೆ.
ಕೋವಿಡ್‌ನಿಂದಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ರೈತರು ಹಾಗೂ ಪಶುಪಾಲಕರು ಮತ್ತು ಜಾನುವಾರು ಸಾಕಣೆದಾರರಿಗೆ, ರಾಷ್ಟ್ರೀಯ ಜಾನುವಾರು ಮಿಷನ್ ಅಡಿ ಉದ್ಯಮಶೀಲತೆ ಹಾಗೂ ಉದ್ಯೋಗಾವಕಾಶ ಹೆಚ್ಚಿಸಲು ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗ್ತಿದೆ.
ಈ ಮೂಲಕ ಜಾನುವಾರು ಸಾಕಣೆಯಲ್ಲಿ ತೊಡಗಿದವರಿಗೆ ಉದ್ಯೋಗ ಸೃಷ್ಟಿಸಲು ಪಶುಸಂಗೋಪನೆ ಇಲಾಖೆ ಮುಂದಾಗಿದೆ. ಈ ಕುರಿತಾಗಿ ಕೇಂದ್ರ ಪಶುಸಂಗೋಪನೆ ಸಚಿವರೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ಸಚಿವ ಪ್ರಭು ಚೌಹಾಣ್ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಅನುದಾನದ ಕುರಿತು ಚರ್ಚೆ ಕೂಡ ನಡೆಸಲಾಗಿದೆ. ರಾಜ್ಯದ ಪಾಲನ್ನು ಆದಷ್ಟು ಬೇಗ ನೀಡುವುದಾಗಿ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ಸಂಚಾರಿ ಪಶುಚಿಕಿತ್ಸಾ ಆ್ಯಂಬುಲೆನ್ಸ್ ನೀಡಲು ಮನವಿ
ರಾಜ್ಯದಲ್ಲಿ 29,360 ಹಳ್ಳಿಗಳಿವೆ. 5,632 ಹಳ್ಳಿಗಳನ್ನು ಮಾತ್ರ ಆ್ಯಂಬುಲೆನ್ಸ್ ಸೇವೆ ನೀಡಲು ಸಾಧ್ಯವಾಗುತ್ತಿದೆ. ಸದ್ಯ ರಾಜ್ಯದಲ್ಲಿ ಪ್ರತಿ ಜಿಲ್ಲೆಗೆ ಒಂದರಂತೆ 15 ಜಿಲ್ಲೆಗಳಿಗೆ ಪಶು ಸಂಜೀವಿನಿ ನೀಡಲಾಗಿದೆ. ರಾಜ್ಯದ ಎಲ್ಲಾ ತಾಲೂಕುಗಳಿಂದ ಸಂಚಾರಿ ಪಶು ಶಸ್ತ್ರ ಚಿಕಿತ್ಸಾ ವಾಹನಕ್ಕೆ ಬೇಡಿಕೆ ಇದೆ. ವಾಹನ ಖರೀದಿಗಾಗಿ ಕೇಂದ್ರದಿಂದ ಅನುದಾನ ನೀಡಬೇಕೆಂದು ಮನವಿ ಮಾಡಲಾಗಿದೆ ಎಂದು ತಿಳಸಿದಿರು.
ಕಾಲುಬಾಯಿ ರೋಗಕ್ಕೆ ನೆರವು
ರಾಷ್ರ್ಟೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ 2ನೇ ಸುತ್ತಿನ ಲಸಿಕೆ ನೀಡಲು ಕೇಂದ್ರ ಪಶುಸಂಗೋಪನೆ ಮತ್ತು ಡೈರಿ ಸಚಿವರಿಗೆ ಮನವಿ ಮಾಡಲಾಗಿದೆ. ಅಲ್ಲದೇ ರಾಜ್ಯದಲ್ಲಿ ಕಂಡು ಬಂದ ಕಾಲುಬಾಯಿ ರೋಗದ ನಿಯಂತ್ರಣ ಹಾಗೂ ಸ್ಥಿತಿಗತಿ ಕುರಿತು ಕೇಂದ್ರ ಸಚಿವರೊಂದಿಗೆ ವಿಸ್ತಾರವಾಗಿ ಚರ್ಚೆ ನಡೆಸಲಾಗಿದೆ. ಎರಡನೇ ಸುತ್ತಿನ ಲಸಿಕೆಯನ್ನು ಆದಷ್ಟು ಬೇಗ ರಾಜ್ಯಕ್ಕೆ ನೀಡುವುದಾಗಿ ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ ಎಂದರು.
ಗೋಶಾಲೆಗಳಿಗೆ ಅನುದಾನ
ರಾಜ್ಯದಲ್ಲಿ ಗೋಹತ್ಯೆ ನಿಷೇಧ ಜಾರಿ ಮಾಡಲಾಗಿದೆ. ಈ ಮೂಲಕ ಪ್ರತಿ ವರ್ಷ 2 ಲಕ್ಷ ಜಾನುವಾರುಗಳು ಗೋಶಾಲೆಗಳಿಗೆ ಬರುವ ನಿರೀಕ್ಷೆ ಇದೆ. ಸದ್ಯ ರಾಜ್ಯದಲ್ಲಿ ದಿನವೊಂದಕ್ಕೆ ರೂ.17 ಪ್ರತಿ ಗೋವಿಗೆ ಪ್ರತಿ ದಿನಕ್ಕೆ ನೀಡಲಾಗುತ್ತಿದೆ. ಆದರೆ, ಗೋವುಗಳ ನಿರ್ವಹಣೆಗೆ ಹೆಚ್ಚಿನ ಧನ ಸಹಾಯಬೇಕೆಂದು ರಾಜ್ಯದ ಎಲ್ಲ ಗೋಶಾಲೆಗಳು ಮನವಿ ಸಲ್ಲಿಸಿದ್ದಾರೆ.
ಹೀಗಾಗಿ, ಗೋವುಗಳಿಗೆ ದಿನವೊಂದಕ್ಕೆ ನೀಡುವ ನಿರ್ವಹಣಾ ವೆಚ್ಚವನ್ನು ಹೆಚ್ಚಿಸಲು ಕೋರಿಕೊಳ್ಳಲಾಗಿದೆ. ಇದಕ್ಕೆ ವಿಶೇಷ ಅನುದಾನ ನೀಡಲು ಮನವಿ ಮಾಡಲಾಗಿದೆ. ಇದರಿಂದಾಗಿ ಗೋವುಗಳ ಆರೈಕೆಗೆ ಹೆಚ್ಚು ಸಹಕಾರಿಯಾಗಲಿದೆ ಎಂದು ಸಚಿವರು, ಕೇಂದ್ರ ಪಶುಸಂಗೋಪನೆ ಸಚಿವ ಪುರುಷೋತ್ತಮ್ ರೂಪಾಲ ಅವರಿಗೆ ಮನವರಿಕೆ ಮಾಡಿದ್ದಾರೆ.
ರಾಜ್ಯದ ಜನಪ್ರಿಯು ಯೋಜನೆಗಳಿಗೆ ಕೇಂದ್ರ ಸಚಿವರ ಶ್ಲಾಘನೆ
ರಾಜ್ಯದಲ್ಲಿ ಪಶುಸಂಗೋಪನೆ ಇಲಾಖೆಯಿಂದ ಪರಿಚಯಿಸಲಾದ ನೂತನ ಯೋಜನೆಗಳಲ್ಲಿ ಪಶು ಸಂಜೀವಿನಿ, ಪ್ರಾಣಿ ಕಲ್ಯಾಣ ಸಹಾಯವಾಣಿ, ಪ್ರಾಣಿ ಕಲ್ಯಾಣ ಮಂಡಳಿ, ಜಿಲ್ಲೆಗೊಂದು ಗೋಶಾಲೆ ಹಾಗೂ ಗೋಹತ್ಯೆ ನಿಷೇಧದಂತಹ ಜನಪ್ರಿಯ ಯೋಜನೆಗಳ ಬಗ್ಗೆ ಕೇಂದ್ರ ಸಚಿವರು ಹರ್ಷ ವ್ಯಕ್ತಪಡಿಸಿದ್ದಾರೆ. ಈ ತರಹದ ಜನಪ್ರಿಯ ಯೋಜನೆಗಳನ್ನು ಬೇರೆ ರಾಜ್ಯದವರು ಸಹ ಅಳವಡಿಸಿಕೊಂಡರೆ ದೇಶದಲ್ಲಿ ಜಾನುವಾರಗಳ ಆರೋಗ್ಯ ಕಾಪಾಡುವಲ್ಲಿ ಹಾಗೂ ಗೋವುಗಳ ಸಂತತಿ ವೃದ್ಧಿಸುವ ನಿಟ್ಟಿನಲ್ಲಿ ಹೆಚ್ಚು ಸಹಕಾರಿಯಾಗಲಿದೆ ಎಂದು ಕೇಂದ್ರ ಸಚಿವರು ಅಭಿಪ್ರಾಯಪಟ್ಟಿದ್ದಾರೆ.
ಆರ್‌ಕೆವಿವೈ ಬಗ್ಗೆ ಚರ್ಚೆ
ದೆಹಲಿಯಲ್ಲಿ ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಭೇಟಿ ಮಾಡಿ ಕೃಷಿ ಇಲಾಖೆಯಿಂದ ಪಶು ಪಾಲನಾ ಇಲಾಖೆಗೆ ಒದಗಿಸಬಹುದಾದ ಯೋಜನೆಗಳ ಬಗ್ಗೆ ಸಚಿವ ಪ್ರಭು ಚೌಹಾಣ್ ಚರ್ಚೆ ನಡೆಸಿದರು. ಆರ್‌ಕೆವಿವೈ ಬಗ್ಗೆ ಚರ್ಚಿಸಲಾಗಿದ್ದು, ವಿಸ್ತೃತವಾದ ಯೋಜನೆಯನ್ನು ಇಲಾಖೆಯಿಂದ ಸಲ್ಲಿಸಿ ಎಂದು ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ದೊಡ್ಡ ಪ್ರಮಾಣದಲ್ಲಿ ಗೊಬ್ಬರ ಉತ್ಪಾದನೆ
ರಾಸಾಯನಿಕ ಮತ್ತು ರಸಗೊಬ್ಬರ ಮತ್ತು ನವೀಕರಿಸಬಹುದಾದ ಇಂಧನ ಖಾತೆಯ ಕೇಂದ್ರದ ರಾಜ್ಯ ಸಚಿವ ಭಗವಂತ ಖೂಬಾ ಅವರನ್ನು ಭೇಟಿ ಮಾಡಿ ಗೋಶಾಲೆಗಳನ್ನು ಆತ್ಮನಿರ್ಭರ ಮಾಡುವ ನಿಟ್ಟಿನಲ್ಲಿ ಈಗಾಗಲೇ ರಾಜ್ಯದಲ್ಲಿ ಸಚಿವ ಪ್ರಭು ಚೌಹಾಣ್ ಕಾರ್ಯಪ್ರವೃತ್ತರಾಗಿದ್ದಾರೆ. ಮುಂದಿನ ದಿನಗಳಲ್ಲಿ ಸಗಣಿಯಿಂದ ದೊಡ್ಡ ಪ್ರಮಾಣದಲ್ಲಿ ಗೊಬ್ಬರ ತಯಾರಿಸುವ ನಿಟ್ಟಿನಲ್ಲಿ ಚರ್ಚೆ ನಡೆಸಲಾಗಿದೆ.
ಎಸ್‌ಸಿಪಿ/ಟಿಎಸ್‌ಪಿ ಯೋಜನೆ
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಎ. ನಾರಾಯಣಸ್ವಾಮಿ ಅವರೊಂದಿಗೆ ಎಸ್‌ಸಿಪಿ/ಟಿಎಸ್‌ಪಿ ಯೋಜನೆಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಇಲಾಖೆಯ ಎಲ್ಲ ಯೋಜನೆಗಳಿಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಸಹಾಯ ನೀಡುವ ಬಗ್ಗೆ ಗಮನಹರಿಸುವುದಾಗಿ ಸಚಿವರು ತಿಳಿಸಿದ್ದಾರೆ.