ಬೆಂಗಳೂರು :ಮೊದಲು ಸಂಖ್ಯಾಬಲ ಕೊರತೆಯಿಂದ ಅಧಿಕಾರ ಕೈತಪ್ಪಿದ್ರೂ ಮತ್ತೆ ಅಧಿಕಾರ ಹಿಡಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಂಕಷ್ಟಗಳ ಸರಮಾಲೆಯಲ್ಲೇ ಒಂದು ವರ್ಷ ಪೂರೈಸಬೇಕಾಯಿತು.
ಅಧಿಕಾರ ಚುಕ್ಕಾಣೆ ಹಿಡಿದ ಕೂಡಲೇ ಮೊದಲು ಎದುರಾಗಿದ್ದು, ನೆರೆ ನಂತರ ಮಹಾಮಾರಿ ಕೋವಿಡ್. ರಾಜ್ಯದ ಆರ್ಥಿಕ ಸ್ಥಿತಿ ಕುಂಠಿತವಾದರೂ ಅಭಿವೃದ್ಧಿ ಕೆಲಸಗಳು ಸ್ಥಗಿತವಾದ್ರೂ ಕೊರೊನಾ ನಿಯಂತ್ರಣಕ್ಕೆ ಬಿಎಸ್ವೈ ಟೊಂಕಕಟ್ಟಿ ನಿಂತಿದ್ದಾರೆ. ತಮ್ಮ ವಯಸ್ಸನ್ನು ಲೆಕ್ಕಿಸದೆ ಯಡಿಯೂರಪ್ಪ ಅವರು ಸತತ ಸಭೆಗಳನ್ನು ನಡೆಸಿ ಜಿಲ್ಲಾಡಳಿತಗಳು ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ಪರಿಶೀಲಿಸಿ ಸಲಹೆ, ಸೂಚನೆಗಳನ್ನು ನೀಡುತ್ತಿದ್ದಾರೆ. ಬೆಂಗಳೂರು ಸೇರಿ ರಾಜ್ಯದಲ್ಲಿ ಗುರುತಿಸಲಾಗಿರುವ ಕಂಟೇನ್ಮೆಂಟ್ ಪ್ರದೇಶಗಳಲ್ಲಿ ಮತ್ತು ಹಾಟ್‌ಸ್ಪಾಟ್ ಪ್ರದೇಶದಲ್ಲಿ ಲಾಕ್‌ಡೌನ್ ಸಡಿಲಿಕೆ ಅನ್ವಯವಾಗುವುದಿಲ್ಲ ಎಂದು ಆ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ಲಾಕ್‌ಡೌನ್ ಯಥಾಸ್ಥಿತಿ ಮುಂದುವರಿಸಿದರು.
ಲಾಕ್‌ಡೌನ್ ನಿಯಮಾವಳಿಯಲ್ಲಿ ಸಡಿಲಿಕೆ ಮಾಡಿದ ನಂತರ ನಲವತ್ತೆರಡು ದಿನಗಳ ಬಳಿಕ ಬಹುತೇಕ ಆರ್ಥಿಕ ಚಟುವಟಿಕೆ ಆರಂಭಗೊಂಡವು. ಸೂಕ್ಷ್ಮ ಪ್ರದೇಶಗಳನ್ನು ಪ್ರದೇಶ ಹೊರತುಪಡಿಸಿ ಇನ್ನುಳಿದ ಪ್ರದೇಶದಲ್ಲಿ ಮುಖ್ಯಮಂತ್ರಿ ಆರ್ಥಿಕತೆಗೆ ಉತ್ತೇಜನ ನೀಡಿದರು. ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಜನಜೀವನ ಸಹಜ ಸ್ಥಿತಿಯತ್ತ ಮರಳಿತು. ಈ ಮೂಲಕ ರಾಜ್ಯದ ಆರ್ಥಿಕ ಪುನಶ್ಚೇತನಕ್ಕೆ ಅನುವು ಮಾಡಿಕೊಟ್ಟರು. ಲಾಕ್ಡೌನ್ನಿಂದಾಗಿ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದ ಬಹುತೇಕ ಚಟುವಟಿಕೆಗಳು ಪುನರಾರಂಭಗೊಂಡವು.
ತೆರಿಗೆ ಸಂಗ್ರಹದಲ್ಲಿ ಎರಡನೇ ಸ್ಥಾನ :ಡಿಸೆಂಬರ್ ಅಂತ್ಯದ ವೇಳೆಗೆ ರಾಜ್ಯದಲ್ಲಿ ₹61,245 ಕೋಟಿ ತೆರಿಗೆ ಸಂಗ್ರಹ ಮಾಡಿ ರಾಷ್ಟ್ರದಲ್ಲೇ ಕರ್ನಾಟಕ 2ನೇ ಸ್ಥಾನದಲ್ಲಿದೆ. 2019-20ನೇ ಸಾಲಿಗೆ ₹76,046 ಕೋಟಿ ವಾಣಿಜ್ಯ ಸಂಗ್ರಹದ ಗುರಿಯಿತ್ತು. ಡಿಸೆಂಬರ್ ವೇಳೆಗೆ ₹55,984 ಕೋಟಿ ಸಂಗ್ರಹವಾಗಿ ಶೇ.73.6ರಷ್ಟು ಗುರಿ ಸಾಧನೆಯಾಗಿದೆ ಎಂದು ಯಡಿಯೂರಪ್ಪ ಅವರು ಕಳೆದ ತಿಂಗಳ ಸಭೆಯಲ್ಲಿ ತಿಳಿಸಿದ್ದರು.
ಜಿಎಸ್‍ಟಿಯಲ್ಲೂ ಶೇ.14.2ರಷ್ಟು ಬೆಳವಣಿಗೆಯಾಗಿದೆ. 2020ರ ಏಪ್ರಿಲ್ 1ರಿಂದ ಜಿಎಸ್‍ಟಿ ಪಾವತಿಯ ಹೊಸ ನಮೂನೆಗಳು ಜಾರಿಗೆ ಬರಲಿವೆ. ಅವುಗಳ ಬಗ್ಗೆ ಜನ ಜಾಗೃತಿ ಮೂಡಿಸಬೇಕು. ಈ ನಮೂನೆಗಳ ಪರೀಕ್ಷಾರ್ಥ ಪ್ರಯೋಗದಲ್ಲಿ ದೇಶದಲ್ಲೇ ಕರ್ನಾಟಕದ ಮೊದಲ ಸ್ಥಾನದಲ್ಲಿದೆ ಎಂದು ಹೇಳಿದರು.
ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ರಾಜ್ಯಕ್ಕೆ ₹1735 ಕೋಟಿ ಮೊತ್ತದ 4.45 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯ ಪೂರೈಕೆ ಮಾಡಲಾಗಿದೆ. ಏಪ್ರಿಲ್‌ನಿಂದ ಜೂನ್ ತಿಂಗಳವರೆಗೆ ಮೂರು ತಿಂಗಳ ಕಾಲ ₹4.01 ಕೋಟಿ ರಾಷ್ಟ್ರೀಯ ಆಹಾರ ಭದ್ರತಾ ಯೋಜನಾ ಕಾಯ್ದೆಯಡಿ ಅರ್ಹ ಫಲಾನುಭವಿಗಳಿಗೆ ಉಚಿತವಾಗಿ ಆಹಾರ ಧಾನ್ಯ ವಿತರಿಸಲು ₹2,351 ಕೋಟಿ ವೆಚ್ಚವನ್ನು ಕೇಂದ್ರ ಸರ್ಕಾರ ಭರಿಸುತ್ತಿದ್ದು, ಕಳೆದ ಮೇ 7ರವರೆಗೆ ರಾಜ್ಯ ಸರ್ಕಾರ ₹1,735 ಕೋಟಿ ಮೌಲ್ಯದ 4.45 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯ ಎತ್ತುವಳಿ ಮಾಡಿದೆ.
ಲಾಕ್‌ಡೌನ್ ಸಮಯದಲ್ಲಿ 302 ರೈಲು ರೇಕ್ ಲೋಡ್ ಅಂದರೆ 8.03 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯಗಳನ್ನು ರಾಜ್ಯಕ್ಕೆ ನೀಡಿದೆ. ಪಿಎಂಜಿಕೆಎವೈ ಮತ್ತು ಎನ್‌ಎಫ್‌ಎಸ್‌ಎ ರಾಜ್ಯದ ಆಹಾರ ಧಾನ್ಯದ ಅಗತ್ಯತೆಗಳನ್ನು ಪೂರೈಸಲು ಈವರೆಗೆ ಪ್ರತಿನಿತ್ಯ 7.48 ಲಕ್ಷ ಚೀಲ ಆಹಾರ ಧಾನ್ಯಗಳನ್ನು ಕೇಂದ್ರದಿಂದ ಸ್ವೀಕರಿಸಿ ರಾಜ್ಯದಲ್ಲಿ ವಿತರಣೆ ಮಾಡಲಾಗಿದೆ.