ಕರ್ನಾಟಕ

karnataka

ETV Bharat / city

ಮೊದಲ ಮಹಿಳಾ ಸಿಜೆಐ ಆಗ್ತಾರೆ ಕನ್ನಡತಿ ನ್ಯಾ. ನಾಗರತ್ನರ ಹಿನ್ನೆಲೆ, ಸಾಧನೆ.. ಅಪ್ಪನ ಹಾದಿಯಲ್ಲಿ ಮಗಳು.. - Justice Nagarathna

ಈವರೆಗೆ ದೇಶಕ್ಕೆ ಮಹಿಳಾ ಸಿಜೆಐ ಸಿಕ್ಕಿಲ್ಲ ಎಂಬ ಕೊರತೆಯನ್ನ ಇವರು ನೀಗಿಸಲಿದ್ದಾರೆ. ಇವರ ತಂದೆ ಇ.ಎಸ್ ವೆಂಕಟರಾಮಯ್ಯ, 1989ರಲ್ಲಿ ಸುಪ್ರೀಂಕೋರ್ಟ್​​ನ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಈ ನಿಟ್ಟಿನಲ್ಲಿ ನಾಗರತ್ನ ಸಿಜೆಐ ಆದಲ್ಲಿ ತಂದೆ ಮಗಳು ಸಿಜೆಐ ಆದ ಇತಿಹಾಸವೂ ದಾಖಲಾಗಲಿದೆ..

BV Nagarathna
ನ್ಯಾ. ನಾಗರತ್ನ

By

Published : Aug 27, 2021, 4:52 PM IST

ಬೆಂಗಳೂರು :ರಾಜ್ಯ ಹೈಕೋರ್ಟ್​ನ ಹಿರಿಯ ನ್ಯಾಯಮೂರ್ತಿ ಆಗಿರುವ ಬಿ.ವಿ ನಾಗರತ್ನ ಅವರನ್ನು ಈಗಾಗಲೇ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಆಗಿ ನಿಯೋಜಿಸಿ ರಾಷ್ಟ್ರಪತಿ ಆದೇಶ ಹೊರಡಿಸಿದ್ದಾರೆ. ಸೋಮವಾರ ಅಥವಾ ಮಂಗಳವಾರ ಸುಪ್ರೀಂ ನ್ಯಾಯಮೂರ್ತಿಯಾಗಿ ಪ್ರಮಾಣ ವಚನವನ್ನೂ ಸ್ವೀಕರಿಸಲಿದ್ದಾರೆ. 2027ಕ್ಕೆ ದೇಶದ ಪ್ರಪ್ರಥಮ ಮಹಿಳಾ ಸಿಜೆಐ ಆಗಲಿರುವ ಇವರ ಹಿನ್ನೆಲೆ ಹಾಗೂ ಸಾಧನೆಯ ಕುರಿತು ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ನ್ಯಾ. ಬಿ.ವಿ ನಾಗರತ್ನ ಹುಟ್ಟಿದ್ದು ಬೆಳೆದದ್ದು ಎಲ್ಲವೂ ಬೆಂಗಳೂರಿನಲ್ಲಿಯೇ. ಇವರ ತಂದೆ ಇ.ಎಸ್ ವೆಂಕಟರಾಮಯ್ಯ ಸುಪ್ರೀಂಕೋರ್ಟ್​ನ ಸಿಜೆಐ ಆಗಿದ್ದವರು. ತಾಯಿ ಹೆಸರು ಪದ್ಮಾ ವೆಂಕಟೇಶ್. ನಗರದ ಸೋಫಿಯಾ ಹೈಸ್ಕೂಲ್​​ನಲ್ಲಿ ಎಸ್ಎಸ್ಎಲ್​​​ಸಿವರೆಗೆ ಓದಿದ್ದ ನಾಗರತ್ನ ಅವರು ದೆಹಲಿಯ ಭಾರತೀಯ ವಿದ್ಯಾಭವನದಲ್ಲಿ ಪಿಯುಸಿ ಅಭ್ಯಾಸ ಮಾಡಿದ್ದಾರೆ. ನಂತರ ದೆಹಲಿಯ ಜೀಸಸ್ ಮತ್ತು ಮೇರಿ ಕಾಲೇಜಿನಲ್ಲಿ ಇತಿಹಾಸ ವಿಷಯದಲ್ಲಿ ಪದವಿ ಪಡೆದು, ಬಳಿಕ ಅಲ್ಲಿಯೇ ಕಾಂಪಲ್ ಲಾ ಸೆಂಟರ್​ನಲ್ಲಿ ಕಾನೂನು ಪದವಿ ಪಡೆದರು.

2008ರಲ್ಲಿ ಹೈಕೋರ್ಟ್ ನ್ಯಾಯಮೂರ್ತಿ

ವಿದ್ಯಾಭ್ಯಾಸದ ನಂತರ 1987ರಲ್ಲಿ ಕೆಸ್ವಿ ಅಂಡ್ ಕೋ ಲಾ ಫರ್ಮ್‌ನಲ್ಲಿ ಹಿರಿಯ ವಕೀಲರಾದ ವಾಸುದೇವರೆಡ್ಡಿ ಹಾಗೂ ಜಿ.ವಿ ಶಾಂತರಾಜು ಅವರ ಬಳಿ ಸಹಾಯಕ ವಕೀಲೆಯಾಗಿ ವೃತ್ತಿ ಆರಂಭಿಸುತ್ತಾರೆ. 1994ರಲ್ಲಿ ಸ್ವತಂತ್ರ ವಕೀಲೆಯಾದ ಬಿ.ವಿ ನಾಗರತ್ನ, 2008ರ ಫೆ.18ರಂದು ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಳ್ಳುತ್ತಾರೆ.

ನ್ಯಾಯಮೂರ್ತಿಯಾಗಿ ನೇಮಕಗೊಳ್ಳುವ ಮುನ್ನ ಮಧ್ಯಸ್ಥಿಕೆ, ಭೂಸ್ವಾಧೀನ, ಸೇವಾ ಕಾನೂನು, ಕೌಟುಂಬಿಕ ಕಾನೂನು, ಆಡಳಿತಾತ್ಮಕ ಕಾನೂನು, ಸಾಂವಿಧಾನಿಕ ಕಾನೂನು, ವಾಣಿಜ್ಯ ಕಾನೂನು ವಿಷಯಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್, ವಿವಿಧ ಹೈಕೋರ್ಟ್‌ಗಳು ಮತ್ತು ವಿಚಾರಣಾ ನ್ಯಾಯಾಲಯದಲ್ಲಿ ಕಕ್ಷೀದಾರರನ್ನು ಪ್ರತಿನಿಧಿಸುತ್ತಾರೆ.

ಇದನ್ನೂ ಓದಿ: ನ್ಯಾ. ಬಿ ವಿ ನಾಗರತ್ನ ಸೇರಿ 9 ಮಂದಿ ಸುಪ್ರೀಂ ಜಸ್ಟೀಸ್​​​​​​​ಗಳಾಗಿ ನೇಮಕ ಮಾಡಿ ರಾಷ್ಟ್ರಪತಿ ಆದೇಶ

ಒಂದಷ್ಟು ಕಾಲ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಪರವಾಗಿಯೂ ಕೆಲಸ ಮಾಡುವ ಇವರು, ಬೆಂಗಳೂರು ಕೆರೆಗಳ ಸಂರಕ್ಷಣೆ ವಿಚಾರದಲ್ಲಿ ನ್ಯಾಯಾಲಯಕ್ಕೆ ಸಹಕಾರ ನೀಡಲು ಅಮಿಕಸ್ ಕ್ಯೂರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದಂತೆ ಹಲವು ಆದೇಶಗಳನ್ನು ನೀಡಿರುವ ನ್ಯಾ. ನಾಗರತ್ನ, ಪ್ರೌಢ ಶಾಲಾ ಮಕ್ಕಳಿಗೆ ಸ್ಯಾನಿಟರಿ ನ್ಯಾಪ್ಕಿನ್ ಒದಗಿಸುವಂತೆಯೂ ಸರ್ಕಾರಕ್ಕೆ ತಾಕೀತು ಮಾಡಿದ್ದರು.

ಕೇವಲ ಬಾಯಿ ಮಾತಿಗೆ ಮಹಿಳೆಯ ಬಲವರ್ಧನೆ ಎಂಬುದು ಪ್ರಯೋಜನಕ್ಕೆ ಬರುವುದಿಲ್ಲ, ಆಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ತಾಕೀತು ಮಾಡಿದ್ದರು. ಶಾಲಾ ಮಕ್ಕಳಿಗೆ ಬಿಸಿಯೂಟ ನೀಡುವಂತೆ, ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಪಡಿಸುವಂತೆ ಸರ್ಕಾರಕ್ಕೆ ಹಲವು ನಿರ್ದೇಶನ ನೀಡಿದ್ದರು.

ಅಕ್ರಮ ಸಂಬಂಧದಿಂದ ಹುಟ್ಟುವ ಮಕ್ಕಳು ಅಕ್ರಮವಲ್ಲ. ಅಕ್ರಮ ಸಂಬಂಧದಿಂದ ಹುಟ್ಟಿದ ಅಥವಾ ಎರಡನೇ ಹೆಂಡತಿ ಮಕ್ಕಳಿಗೂ ಅನುಕಂಪದ ಉದ್ಯೋಗ ಸಿಗಬೇಕು ಎಂದು ನೀಡಿದ್ದ ತೀರ್ಪು ರಾಷ್ಟ್ರದೆಲ್ಲೆಡೆ ಚರ್ಚೆಯಾಗಿತ್ತು. ಇದೇ ತೀರ್ಪಿನಲ್ಲಿ ಈ ಸಂಬಂಧ ಕಾನೂನು ಪರಿಷ್ಕರಿಸುವಂತೆಯೂ ನ್ಯಾಯಮೂರ್ತಿ ಕೇಂದ್ರ ಸರ್ಕಾರಕ್ಕೆ ಸೂಚಿಸಿದ್ದರು.

36 ದಿನಗಳ ಕಾಲ ಸಿಜೆಐ..

ಸದ್ಯ ಸುಪ್ರೀಂಕೋರ್ಟ್​​​ಗೆ ನಿಯೋಜನೆಗೊಂಡಿರುವ ನ್ಯಾ. ಬಿ.ವಿ ನಾಗರತ್ನ 2027ರಲ್ಲಿ ನಿವೃತ್ತಿಯಾಗಲಿದ್ದಾರೆ. ಇದಕ್ಕೂ ಮುನ್ನ ಸೇವಾವಧಿ ಲಭ್ಯತೆ ಆಧಾರದಲ್ಲಿ 36 ದಿನಗಳ ಕಾಲ ಸಿಜೆಐ ಆಗಿಯೂ ಕೆಲಸ ಮಾಡುವ ಅವಕಾಶ ಇದೆ.

ಈವರೆಗೆ ದೇಶಕ್ಕೆ ಮಹಿಳಾ ಸಿಜೆಐ ಸಿಕ್ಕಿಲ್ಲ ಎಂಬ ಕೊರತೆಯನ್ನ ಇವರು ನೀಗಿಸಲಿದ್ದಾರೆ. ಇವರ ತಂದೆ ಇ.ಎಸ್ ವೆಂಕಟರಾಮಯ್ಯ, 1989ರಲ್ಲಿ ಸುಪ್ರೀಂಕೋರ್ಟ್​​ನ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಈ ನಿಟ್ಟಿನಲ್ಲಿ ನಾಗರತ್ನ ಸಿಜೆಐ ಆದಲ್ಲಿ ತಂದೆ ಮಗಳು ಸಿಜೆಐ ಆದ ಇತಿಹಾಸವೂ ದಾಖಲಾಗಲಿದೆ.

ಇನ್ನು, ಪ್ರಸ್ತುತ ಸುಪ್ರೀಂಕೋರ್ಟ್​​​ನ ನ್ಯಾಯಮೂರ್ತಿ ಆಗಿರುವ ಡಿ.ವೈ ಚಂದ್ರಚೂಡ ಅವರು 2022ರ ನವೆಂಬರ್​​ನಲ್ಲಿ ಮುಖ್ಯ ನ್ಯಾಯಮೂರ್ತಿ ಹುದ್ದೆಗೇರಲಿದ್ದಾರೆ. ಇವರ ತಂದೆ ವೈ.ವಿ ಚಂದ್ರಚೂಡ ಅವರು 1978ರಿಂದ 1985ರ ಅವಧಿಯಲ್ಲಿ ಸಿಜೆಐ ಆಗಿ ಸೇವೆ ಸಲ್ಲಿಸಿದ್ದಾರೆ. ಹೀಗಾಗಿ, ತಂದೆ ಮಕ್ಕಳು ಸಿಜೆಐ ಆದ ಖ್ಯಾತಿಯೂ ರಾಜ್ಯಕ್ಕೆ ಲಭಿಸಲಿದೆ.

ABOUT THE AUTHOR

...view details