ಬೆಂಗಳೂರು/ವಿಜಯಪುರ:ರಾಜ್ಯಾದ್ಯಂತ ಇಂದಿನಿಂದ ಶಾಲೆಗಳು ಪುನಾರಂಭವಾಗಿವೆ. ಸರ್ಕಾರಿ, ಅನುದಾನಿತ ಮತ್ತು ಅನುದಾನಿತರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ 2022-23ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಿದ್ದು, ವಿದ್ಯಾರ್ಥಿಗಳನ್ನು ಶಿಕ್ಷಕರು ಆದರದಿಂದ ಬರಮಾಡಿಕೊಳ್ಳುತ್ತಿದ್ದಾರೆ.
ಮಕ್ಕಳಿಗೆ ಅದ್ಧೂರಿ ಸ್ವಾಗತ: ವಿದ್ಯಾರ್ಥಿಗಳನ್ನು ಶಾಲೆಗೆ ಅದ್ಧೂರಿಯಾಗಿ ಸ್ವಾಗತ ಮಾಡಿಕೊಳ್ಳಲು ಶಾಲಾ ಆಡಳಿತಾಧಿಕಾರಿಗಳು, ಸಿಬ್ಬಂದಿ ಸಿದ್ಧತೆ ಮಾಡಿಕೊಂಡಿದ್ದಾರೆ. ತಳಿರು ತೋರಣ ಕಟ್ಟಿ ಶಾಲೆಗಳನ್ನು ಶೃಂಗರಿಸಲಾಗಿದೆ. ಮಕ್ಕಳಿಗೆ ಇಷ್ಟವಾಗುವ ಗಿಫ್ಟ್ , ಸ್ವೀಟ್ ಕೊಟ್ಟು ಆತ್ಮೀಯವಾಗಿ ಬರಮಾಡಿಕೊಳ್ಳಲಾಗುತ್ತಿದೆ.
ಬಿಸಿಯೂಟ ಆರಂಭ: ಕೋವಿಡ್ ಕಾರಣಕ್ಕೆ ಇಷ್ಟು ದಿನ ಕ್ಷೀರಭಾಗ್ಯ ಮತ್ತು ಮಧ್ಯಾಹ್ನದ ಬಿಸಿ ಊಟಕ್ಕೆ ಶಾಲೆಯಲ್ಲಿ ಕಡಿವಾಣ ಹಾಕಿ ದವಸ, ಧಾನ್ಯಗಳನ್ನು ವಿತರಣೆ ಮಾಡಲಾಗುತ್ತಿತ್ತು. ಆದರೆ, ಇಂದಿನಿಂದ ಬಿಸಿಯೂಟವನ್ನು ಆರಂಭಿಸಲು ತಿಳಿಸಲಾಗಿದೆ. ಹಾಗೆಯೇ ಶಾಲಾ ಪ್ರಾರಂಭೋತ್ಸವಕ್ಕೆ ಪೋಷಕರನ್ನೂ ಆಹ್ವಾನಿಸಲು ತಿಳಿಸಿದ್ದು, ಕಲಿಕಾ ಚೇತರಿಕೆ ವಿಶೇಷ ಕಾರ್ಯಕ್ರಮ ಕೂಡ ಶುರುವಾಗಿದೆ.
ಮುದ್ದೇಬಿಹಾಳ ಶಿಕ್ಷಕರ ಸ್ವಯಂ ಶ್ರಮದಾನ: ಮುದ್ದೇಬಿಹಾಳ ಪಟ್ಟಣದ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಶಿಕ್ಷಕರು ಸ್ವತಃ ಕಸ ಗುಡಿಸುವ ಮೂಲಕ ಶ್ರಮದಾನ ಮಾಡಿದರು. ಮಕ್ಕಳ ಬರುವಿಕೆಗೆ ಶಿಕ್ಷಕರೆಲ್ಲಾ ಕಾತರರಾಗಿದ್ದು, ಮೊದಲ ಹದಿನೈದು ದಿನಗಳ ಕಾಲ ವಿವಿಧ ಚಟುವಟಿಕೆಗಳನ್ನು ನಡೆಸಲಾಗುತ್ತದೆ. ಬಳಿಕ ಕ್ರಮಬದ್ಧವಾಗಿ ಪಾಠ, ಪ್ರವಚನಗಳು ಸಾಗಲಿವೆ ಎಂದು ಕೆಬಿಎಂಪಿಎಸ್ ಶಾಲೆ ಮುಖ್ಯಶಿಕ್ಷಕ ಟಿ.ಎನ್.ರೂಢಗಿ ಹೇಳಿದರು. ನಿನ್ನೆ ತಾಳಿಕೋಟೆ ತಾಲೂಕಿನ ಲಿಂಗದಳ್ಳಿ ಗ್ರಾಮದಲ್ಲಿ ಶಾಲೆ ಆರಂಭದ ಕುರಿತು ಗ್ರಾಮ ಪಂಚಾಯತ್ ವತಿಯಿಂದ ಡಂಗೂರ ಸಾರುವ ಮೂಲಕ ಪಾಲಕರಲ್ಲಿ ಅರಿವು ಮೂಡಿಸಲಾಯಿತು.