BSY ಬೇಡ ಅಂದ್ರೂ ದೆಹಲಿಗೆ ತೆರಳಿದ ರೇಣುಕಾಚಾರ್ಯ... ಬಿಜೆಪಿಯಲ್ಲಿ ಸಂಚಲನ! - ಕರ್ನಾಟಕದಲ್ಲಿ ಸಿಎಂ ಬದಲಾವಣೆ
ಶಾಸಕರ ನಿಯೋಗದ ದೆಹಲಿ ಪ್ರವಾಸ ರದ್ದುಗೊಂಡಿದ್ದರೂ ಎಂ.ಪಿ.ರೇಣುಕಾಚಾರ್ಯ ದಿಢೀರ್ ನಿರ್ಧಾರ ಬದಲಿಸಿ ದೆಹಲಿಗೆ ತೆರಳಿದ್ದಾರೆ. ನಿಯೋಗದ ಬದಲು ಒಬ್ಬರೇ ತೆರಳಿದ್ದಾರೆ.
ಬೆಂಗಳೂರು: ನವದೆಹಲಿಗೆ ತೆರಳದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದ್ದರೂ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಏಕಾಂಗಿಯಾಗಿ ಹೈಕಮಾಂಡ್ ಭೇಟಿಗೆ ತೆರಳಿದ್ದಾರೆ.
ಶಾಸಕರ ಸಹಿ ಸಂಗ್ರಹಿಸಿ ನಾಯಕತ್ವ ಬದಲಾವಣೆ ಮಾಡದಂತೆ ಹೈಕಮಾಂಡ್ ಭೇಟಿಗೆ ತೆರಳಬೇಕಿದ್ದ ಶಾಸಕರ ನಿಯೋಗದ ದೆಹಲಿ ಪ್ರವಾಸ ರದ್ದುಗೊಂಡಿದ್ದರೂ ಎಂ.ಪಿ.ರೇಣುಕಾಚಾರ್ಯ ದಿಢೀರ್ ನಿರ್ಧಾರ ಬದಲಿಸಿ ದೆಹಲಿಗೆ ತೆರಳಿದ್ದಾರೆ. ನಿಯೋಗದ ಬದಲು ಒಬ್ಬರೇ ತೆರಳಿದ್ದಾರೆ.
ನಾಳೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಭೇಟಿಯಾಗಲಿರುವ ರೇಣುಕಾಚಾರ್ಯ, ರಾಜ್ಯ ರಾಜಕೀಯ ಕುರಿತು ಮಾತುಕತೆ ನಡೆಸಲಿದ್ದಾರೆ. ಶಾಸಕರ ಅಭಿಪ್ರಾಯ ಯಡಿಯೂರಪ್ಪ ನಾಯಕತ್ವ ಪರವಾಗಿಯೇ ಇದೆ, ಒಂದಿಬ್ಬರು ಮಾತ್ರ ವಿರೋಧವಿದ್ದಾರೆ. ಆದರೆ ಈಗ ನಡೆಯುತ್ತಿರುವ ರಾಜಕೀಯ ಬೆಳವಣಿಗೆ ಲಿಂಗಾಯತ ಸಮುದಾಯದ ಆಕ್ರೋಶಕ್ಕೆ ಕಾರಣವಾಗಲಿದೆ. ಮಠಾಧೀಶರು, ವೀರಶೈವ ಲಿಂಗಾಯತ ಸಮುದಾಯ ಯಡಿಯೂರಪ್ಪ ಪರ ನಿಂತಿದೆ. ಈಗ ನಾಯಕತ್ವದ ಬದಲಾವಣೆ ಮಾಡಿದ್ರೆ ಸಮುದಾಯದ ವಿರೋಧ ಕಟ್ಟಿಕೊಳ್ಳಬೇಕಾಗಲಿದೆ ಎಂದು ಮನವರಿಕೆ ಮಾಡಿಕೊಡಲಿದ್ದಾರೆ ಎನ್ನಲಾಗಿದೆ.
ಈಗಾಗಲೇ ಹೈಕಮಾಂಡ್ ನಾಯಕರಿಂದ ಪೂರ್ವ ಅನುಮತಿ ಪಡೆದು ಶಾಸಕರ ನಿಯೋಗದ ಜೊತೆ ದೆಹಲಿಗೆ ತೆರಳಬೇಕಿತ್ತು. ಆದರೆ ಬೆಳಗ್ಗೆಯಷ್ಟೇ ನಿಯೋಗ ದೆಹಲಿಗೆ ತೆರಳುವುದು ಬೇಡ ಎಂದು ಸಿಎಂ ಸೂಚನೆ ನೀಡಿದ್ದರು. ಅದರಂತೆ ನಿಯೋಗ ದೆಹಲಿ ಪ್ರವಾಸ ರದ್ದುಪಡಿಸಿತ್ತು. ಆದರೆ ನಿಯೋಗ ಹೊರತುಪಡಿಸಿ ಏಕಾಂಗಿಯಾಗಿ ಹೈಕಮಾಂಡ್ ಭೇಟಿಗೆ ರೇಣುಕಾಚಾರ್ಯ ತೆರಳಿ ಬಿಜೆಪಿ ಪಾಳಯದಲ್ಲಿ ಸಂಚಲನ ಮೂಡಿಸಿದ್ದಾರೆ. (ರಾಜ್ಯದಲ್ಲಿ ಸಿಎಂ ಬದಲಾವಣೆ ವದಂತಿ: ಬಿಎಸ್ವೈ ಉಳಿಸಲು ಕೊನೆಯ ಯತ್ನ ಆರಂಭವಾಗಿದೆಯೇ?)