ಬೆಂಗಳೂರು:ರಾಜಸ್ವ ಸಂಗ್ರಹಣೆಯಲ್ಲಿ ಕರ್ನಾಟಕ 3ನೇ ಸ್ಥಾನದಲ್ಲಿದೆ. 2021-22ನೇ ಸಾಲಿಗೆ ನೋಂದಣಿ ಮತ್ತು ಮುದ್ರಾಂಕ ಇಲಾಖೆ 12,655 ಕೋಟಿ ರೂ. ರಾಜಸ್ವ ಸಂಗ್ರಹ ಗುರಿ ಹೊಂದಿದೆ. ಫೆಬ್ರವರಿ 15ಕ್ಕೆ 11,590 ಕೋಟಿ ರೂ. ರಾಜಸ್ವ ಸಂಗ್ರಹವಾಗಿದೆ. ಒಂದೂವರೆ ತಿಂಗಳ ಸಾಧನೆ ಜೊತೆಗೆ ಹೆಚ್ಚಿನ ಆದಾಯ ಸಂಗ್ರಹಿಸಬೇಕಾಗಿದೆ.
ಸಾರ್ವಜನಿಕರ ಸ್ಥಿರ ಮತ್ತು ಚರಾಸ್ತಿಗಳ ವ್ಯವಹಾರಗಳಿಗೆ ಸಂಬಂಧಿಸಿದ ದಸ್ತಾವೇಜುಗಳನ್ನು ನೋಂದಣಿ ಕಾಯ್ದೆಯಡಿ ನೋಂದಾಯಿಸುವುದು ಹಾಗೂ ನೋಂದಾಯಿತ ದಸ್ತಾವೇಜುಗಳಿಗೆ ಸಂಬಂಧಿಸಿದ ಶಾಶ್ವತ ದಾಖಲಾತಿಗಳನ್ನು ಸಂರಕ್ಷಿಸಿ ಸಾರ್ವಜನಿಕರಿಗೆ ಸಕಾಲದಲ್ಲಿ ಸೇವೆಗಳನ್ನು ಒದಗಿಸುವುದು. ಸರ್ಕಾರಕ್ಕೆ ಹೆಚ್ಚಿನ ರಾಜಸ್ವ ಸಂಗ್ರಹಿಸುವ ನಿಟ್ಟಿನಲ್ಲಿ ಕಾಲಕಾಲಕ್ಕೆ ಸ್ಥಿರಾಸ್ತಿಗಳ ಮಾರ್ಗಸೂಚಿ ಮಾರುಕಟ್ಟೆ ಬೆಲೆಗಳನ್ನು ಪರಿಷ್ಕರಿಸಿ ನಿಗದಿಪಡಿಸುವುದು ಸರ್ಕಾರದ ಉದ್ದೇಶ.
ಕರ್ನಾಟಕ ಮುದ್ರಾಂಕ ಕಾಯ್ದೆ 1957ರ ಕಲಂ 67 ಬಿ ಅಡಿಯಲ್ಲಿ ನೋಂದಣಿಗೆ ಕಡ್ಡಾಯವಲ್ಲದ ದಸ್ತಾವೇಜುಗಳಿಗೆ ಸಂಬಂಧಿಸಿದಂತೆ, ಬ್ಯಾಂಕುಗಳು, ಸಂಘಸಂಸ್ಥೆಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸ್ವಾಯತ್ತ ಸಂಸ್ಥೆಗಳು ಚರ ಮತ್ತು ಸ್ಥಿರಾಸ್ತಿಗಳ ಬಗ್ಗೆ ಬರೆದುಕೊಡುವ ಅಥವಾ ಬರೆಸಿಕೊಳ್ಳುವ ದಸ್ತಾವೇಜುಗಳ ತಪಾಸಣೆ, ಷೇರು ವಹಿವಾಟುಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಪತ್ತೆಹಚ್ಚಿ ಸರಿಯಾದ ಮುದ್ರಾಂಕ ಶುಲ್ಕ ಪಾವತಿಸಿಕೊಂಡು ಹೆಚ್ಚಿನ ರಾಜಸ್ವ ಸಂಗ್ರಹಿಸುವುದು. ಕರ್ನಾಟಕ ಮುದ್ರಾಂಕ ಕಾಯ್ದೆ 1957 ರಡಿ ವಿವಿಧ ದಸ್ತಾವೇಜುಗಳಿಗೆ ಮುದ್ರಾಂಕ ಶುಲ್ಕಗಳನ್ನು ಕಾಲಕಾಲಕ್ಕೆ ಪರಿಷ್ಕರಿಸಿ, ಸರ್ಕಾರಕ್ಕೆ ಹೆಚ್ಚಿನ ರಾಜಸ್ವವನ್ನು ಸಂಗ್ರಹಿಸುವುದು. ಸಾರ್ವಜನಿಕರಿಗೆ ಅನುಕೂಲಕರವಾಗುವಂತೆ ನೋಂದಣಿ ಪ್ರಕ್ರಿಯೆಯನ್ನು ಸರಳೀಕರಣಗೊಳಿಸುವುದು ಸರ್ಕಾರದ ಧ್ಯೇಯೋದ್ದೇಶವಾಗಿದೆ.
ಕಚೇರಿ ಸಮಯ ವಿಸ್ತರಣೆ:ಸ್ಥಿರಾಸ್ತಿ ಖರೀದಿ, ಅಡಮಾನ, ವಿಲ್ ಇನ್ನಿತರೆ ದಾಖಲೆ ನೋಂದಣಿ ಮಾಡಿಸುವವರಿಗೆ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಸಬ್ ರಿಜಿಸ್ಟ್ರಾರ್ ಕಚೇರಿ ಸಮಯ ಬೆಳಗ್ಗೆ 8ರಿಂದ ರಾತ್ರಿ 8 ಗಂಟೆವರೆಗೆ ವಿಸ್ತರಿಸಿದೆ. ಜೊತೆಗೆ 2ನೇ ಮತ್ತು 3ನೇ ಶನಿವಾರವೂ ಕರ್ತವ್ಯ ನಿರ್ವಹಿಸುವಂತೆ ಅಧಿಕಾರಿ ಮತ್ತು ಸಿಬ್ಬಂದಿಗೆ ಕಂದಾಯ ಇಲಾಖೆ ಸೂಚನೆ ನೀಡಿದೆ.