ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ (Police Recruitment) ಖಾಲಿ ಇರುವ 1,142 ಪೊಲೀಸ್ ಸಬ್ ಇನ್ಸಪೆಕ್ಟರ್ (PSI Recruitment) ಹಾಗೂ 4,460 ಕಾನ್ಸಟೇಬಲ್ ಹುದ್ದೆಗಳನ್ನು ಶೀಘ್ರವೇ ಕಾಲಮಿತಿಯೊಳಗೆ ಭರ್ತಿ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.
ಪೊಲೀಸ್ ಇಲಾಖೆಯಲ್ಲಿ (Karnataka Police) ಖಾಲಿ ಇರುವ ಹುದ್ದೆಗಳ ಭರ್ತಿ ವಿಚಾರವಾಗಿ ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಸರ್ಕಾರದ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ ಖಾಲಿ ಇರುವ 1,142 ಪಿಎಸ್ಐ ಹಾಗೂ 4,460 ಪೊಲೀಸ್ ಕಾನ್ಸಟೇಬಲ್ (Police Constable) ಹುದ್ದೆಗಳ ಭರ್ತಿಗೆ ಸರ್ಕಾರ ಸಿದ್ಧವಿದೆ. ಈ ನೇಮಕ ಪ್ರಕ್ರಿಯೆ ಪೂರ್ಣಗೊಳಿಸಲು 2022ರ ಜುಲೈವರೆಗೆ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು. ಸರ್ಕಾರದ ವಿಳಂಬಕ್ಕೆ ಆಕ್ಷೇಪಿಸಿದ ಹೈಕೋರ್ಟ್ ಪ್ರತಿಬಾರಿಯೂ ಕಾಲಾವಕಾಶ ಕೇಳಿಕೊಂಡೇ ಬರುತ್ತಿದ್ದೀರಿ. ಇದೀಗ ಮತ್ತೆ ಖಾಲಿ ಹುದ್ದೆಗಳ ಭರ್ತಿಗೆ 8 ತಿಂಗಳು ಕಾಲಾವಕಾಶ ಕೋರುತ್ತಿದ್ದೀರಿ. ಇದನ್ನು ಒಪ್ಪಲು ಸಾಧ್ಯವಿಲ್ಲ. ಶೀಘ್ರವೇ ಹುದ್ದೆಗಳ ಭರ್ತಿ ಮಾಡಿ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿತು.
ಬಳಿಕ, ಹುದ್ದೆಗಳ ಭರ್ತಿಗೆ ಕನಿಷ್ಠ ಕಾಲಮಿತಿ ನಿಗದಿ ಮಾಡಿ. ಎಷ್ಟು ಸಮಯದಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡುತ್ತೀರೆಂಬ ಎಂಬ ಬಗ್ಗೆ ಸ್ಪಷ್ಟವಾಗಿ ತಿಳಿಸಿ ಮುಂದಿನ ಒಂದು ವಾರದಲ್ಲಿ ಪ್ರಮಾಣಪತ್ರ ಸಲ್ಲಿಸಿ ಎಂದು ನಿರ್ದೇಶಿಸಿ ವಿಚಾರಣೆ ಮುಂದೂಡಿತು.
(ರಾಜ್ಯದ 6 ಅಧಿಕಾರಿಗಳು ಸೇರಿ ದೇಶದ 152 ದಕ್ಷ ಪೊಲೀಸರಿಗೆ 'ಕೇಂದ್ರ ಗೃಹ ಸಚಿವರ ಪದಕ')