ಕರ್ನಾಟಕ

karnataka

ETV Bharat / city

ಬೆಂಗಳೂರಲ್ಲಿ ಸ್ವಾತಂತ್ರ್ಯೋತ್ಸವ ದಿನ ದಾಖಲೆ.. ಬಿಎಂಟಿಸಿ ಬಸ್​ನಲ್ಲಿ ಒಂದೇ ದಿನ ಉಚಿತವಾಗಿ 61 ಲಕ್ಷ ಜನ ಪ್ರಯಾಣ - ಈಟಿವಿ ಭಾರತ್ ಕನ್ನಡ

ಬಿಎಂಟಿಸಿ ಬಸ್​ನಲ್ಲಿ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ದಿನಾಚರಣೆಯಂದು ಬಿಎಂಟಿಸಿ ಬಸ್​ ಮತ್ತು ನಮ್ಮ ಮೆಟ್ರೋ ರೈಲಿನಲ್ಲಿ ದಾಖಲೆ ಸಂಖ್ಯೆಯಲ್ಲಿ ಜನರು ಪ್ರಯಾಣಿಸಿದ್ದಾರೆ. ಬಸ್​ನಲ್ಲಿ 61 ಲಕ್ಷಕ್ಕೂ ಹೆಚ್ಚು ಜನ ಹಾಗೂ ಮೆಟ್ರೋದಲ್ಲಿ 8 ಲಕ್ಷಕ್ಕೂ ಅಧಿಕ ಜನ ಸಂಚರಿಸಿದ್ದಾರೆ.

Etv Bharat BMTC
Etv Bharat BMTC

By

Published : Aug 19, 2022, 9:01 AM IST

Updated : Aug 19, 2022, 9:07 AM IST

ಬೆಂಗಳೂರು: ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ದಿನಾಚರಣೆಯಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಸ್​ನಲ್ಲಿ (ಬಿಎಂಟಿಸಿ) ಒಟ್ಟು 61,47,323 ಮಂದಿ ಪ್ರಯಾಣಿಸಿರುವುದಾಗಿ ಸಂಸ್ಥೆ ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಬಿಎಂಟಿಸಿ ರಜತ ಮಹೋತ್ಸವ ಹಾಗೂ 75ನೇ ಸ್ವಾತಂತ್ರದ ಅಮೃತ ಮಹೋತ್ಸ ಹಿನ್ನೆಲೆ ಆಗಸ್ಟ್ 15 ರಂದು ಬಿಎಂಟಿಸಿ ಬಸ್​​ನಲ್ಲಿ ಉಚಿತ ಪ್ರಯಾಣ ಕಲ್ಪಿಸಿತ್ತು. ವೊಲ್ವೋ, ಇಲೆಕ್ಟ್ರಿಕ್ ಬಸ್ ಸೇರಿದಂತೆ ಎಲ್ಲ ಬಿಎಂಟಿಸಿ ಬಸ್​​ಗಳಲ್ಲಿ ಉಚಿತ ಪ್ರಯಾಣವನ್ನು ಕಲ್ಪಿಸಲಾಗಿತ್ತು.

ಬಿಎಂಟಿಸಿ ಬಸ್​ನಲ್ಲಿ ಉಚಿತ ಸೇವೆ:ಆಗಸ್ಟ್ 15 ರಂದು 5,051 ಬಿಎಂಟಿಸಿ ಬಸ್​ಗಳು ಸಂಚರಿಸಿದ್ದು, ಒಟ್ಟು 61,47,323 ಪ್ರಯಾಣಿಕರು ಉಚಿತವಾಗಿ ಬಸ್​ನಲ್ಲಿ ಸಂಚರಿಸಿದ್ದಾರೆ. ನಿತ್ಯ ಬಿಎಂಟಿಸಿ ಬಸ್​​ನಲ್ಲಿ ಸರಾಸರಿ 28 ಲಕ್ಷ ಪ್ರಯಾಣಿಕರು ಸಂಚರಿಸುತ್ತಾರೆ. ಆದರೆ ಸ್ವಾತಂತ್ರ್ಯೋತ್ಸವ ದಿನದಂದು 61 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಉಚಿತವಾಗಿ ಸಂಚರಿಸಿದ್ದಾರೆ.

ನಮ್ಮ ಮೆಟ್ರೋದಲ್ಲಿ ದಾಖಲೆಯ ಸಂಚಾರ: ಇನ್ನು ಆಗಸ್ಟ್ 15ರಂದು ಒಂದೇ ನಮ್ಮ ಮೆಟ್ರೋ ರೈಲಿನಲ್ಲಿ 8,25,190 ಜನ ಪ್ರಯಾಣಿಸಿದ್ದಾರೆ. ಮೆಟ್ರೋ ರೈಲಿನ ದಿನದ ಕಾರ್ಯಾಚರಣೆಯಲ್ಲಿ ಇದು ಹೊಸ ದಾಖಲೆಯಾಗಿದೆ. ಈ ಹಿಂದಿನ ಅತ್ಯಧಿಕ ಸಂಖ್ಯೆಯ 6.1 ಲಕ್ಷಕ್ಕಿಂತ ಹೆಚ್ಚು ಜನರು ಮೆಟ್ರೋ ಸಂಚಾರ ಮಾಡಿದ್ದರು ಎಂದು ಬಿಎಂಆರ್​ಸಿಎಲ್ ಮಾಹಿತಿ ನೀಡಿದೆ.

ಪರ್ಪಲ್ ಲೈನ್‌ನಲ್ಲಿ 2,58,984 ಜನ ಪ್ರಯಾಣಿಸಿದ್ದರೆ, ಗ್ರೀನ್ ಲೈನ್​ನಲ್ಲಿ 4,02,068 ಸವಾರರು ಪ್ರಯಾಣಿಸಿದ್ದರು. ಈ ಹಿಂದೆ ಗರಿಷ್ಠ ಪ್ರಯಾಣದ ದಾಖಲೆ ಪರ್ಪಲ್ ಲೈನ್​ನಲ್ಲಿತ್ತು. ಫ್ಲವರ್ ಶೋಗೆ ರಿಟರ್ನ್ ಪೇಪರ್ ಟಿಕೆಟ್ ನೀಡಿದ ಲಾಲ್‌ಬಾಗ್ ನಿಲ್ದಾಣ ಮತ್ತು ಕಾಂಗ್ರೆಸ್ ಕಾರ್ಯಕರ್ತರಿಗೆ 80,000 ಪೇಪರ್ ಟಿಕೆಟ್‌ಗಳನ್ನು ನೀಡಿದ ನ್ಯಾಷನಲ್ ಕಾಲೇಜು ನಿಲ್ದಾಣದಿಂದ ನೀಡಲಾಗಿದೆ ಎಂದು ಬಿಎಂಆರ್​ಸಿಎಲ್ ಹೇಳಿದೆ.

(ಇದನ್ನೂ ಓದಿ: ಲಾಲ್​​​​​ಬಾಗ್ ಫಲಪುಷ್ಪ ಪ್ರದರ್ಶನ: ಮೆಟ್ರೋ ಟಿಕೆಟ್ ದರದಲ್ಲಿ ರಿಯಾಯಿತಿ, ಪೇಪರ್ ಟಿಕೆಟ್ ಲಭ್ಯ)

ಭರ್ಜರಿ ಆದಾಯ ಸಂಗ್ರಹ:ಸೋಮವಾರ ಒಂದೇ ದಿನ ಭಾರಿ ಪ್ರಮಾಣದಲ್ಲಿ ಪ್ರಯಾಣಿಸಿದ್ದರಿಂದ ನಮ್ಮ ಮೆಟ್ರೋ 1.47 ಕೋಟಿ ರೂ. ಟಿಕೆಟ್ ಆದಾಯ ಸಂಗ್ರಹವಾಗಿದೆ. ಈವರೆಗಿನ ಮೆಟ್ರೋದ ಗರಿಷ್ಠ ಟಿಕೆಟ್ ಆದಾಯ ಸಂಗ್ರಹ 1.2 ಕೋಟಿ ರೂ. ಆಗಿತ್ತು. ಈಗ ಗಳಿಕೆಯಲ್ಲೂ ಹೊಸ ದಾಖಲೆಯಾಗಿದೆ.

ರಾಜಕೀಯ ಪಕ್ಷಗಳ ವಿವಿಧ ಕಾರ್ಯಕ್ರಮ, ಲಾಲ್ ಬಾಗ್ ಫಲಪುಷ್ಪ ಪ್ರದರ್ಶನ, ಸ್ವಾತಂತ್ರ ದಿನಾಚರಣೆ ಪ್ರಯುಕ್ತ ಬೆಂಗಳೂರಲ್ಲಿ ಅಂದು ಲಕ್ಷಾಂತರ ಜನ ಓಡಾಟ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೆಟ್ರೋ ಮತ್ತು ಬಿಎಂಟಿಸಿಯಲ್ಲಿ ದಾಖಲೆಯ ಸಂಖ್ಯೆಯಲ್ಲಿ ಸಾರ್ವಜನಿಕರು ಪ್ರಯಾಣಿಸಿದ್ದಾರೆ.

ಸಾಮಾನ್ಯ ದಿನಗಳಲ್ಲೇ ಮೆಟ್ರೋ ರೈಲು ಮತ್ತು ಬಿಎಂಟಿಸಿ ಬಸ್​​ಗಳಲ್ಲಿ ಜನ ಕಿಕ್ಕಿರಿದಿರುತ್ತಾರೆ. ಇನ್ನು ಈ ದಾಖಲೆಯ ಸಂಖ್ಯೆಯ ಕೇಳಿದ್ರೆ ಜನ ದಟ್ಟಣೆ ಊಹೆಗೂ ನಿಲುಕಲ್ಲ. ನಮ್ಮ ಮೆಟ್ರೋ ಮತ್ತು ಬಿಎಂಟಿಸಿ ದೇಶದಲ್ಲೇ ಉತ್ತಮ ಸಾರ್ವಜನಿಕರ ಸಾರಿಗೆ ಸಂಸ್ಥೆಗಳು ಎಂದು ಈಗಾಗಲೇ ಹೆಸರು ಪಡೆದಿವೆ.

(ಇದನ್ನೂ ಓದಿ: ವಿಶ್ವದ ಆರು ಸುರಕ್ಷಿತ ನಗರಗಳಲ್ಲಿ ಬೆಂಗಳೂರಿಗೆ ಸ್ಥಾನ)

Last Updated : Aug 19, 2022, 9:07 AM IST

ABOUT THE AUTHOR

...view details