ಬೆಂಗಳೂರು :ದೇಸಿ ಪರಂಪರೆಯ ಆಯುರ್ವೇದ ವೈದ್ಯ ಪದ್ದತಿಗೆ ಮನ್ನಣೆ ದೊರಕಿಸಿಕೊಡುವ ಸಲುವಾಗಿ ನೀತಿಯೊಂದನ್ನು ರೂಪಿಸುವ ಕುರಿತು ಒಂದು ತಿಂಗಳಿನಲ್ಲಿ ಅಗತ್ಯ ಕ್ರಮಕೈಗೊಳ್ಳುವುದಾಗಿ ಸರ್ಕಾರ ಭರವಸೆ ನೀಡಿದ್ದರಿಂದ ಕಾಂಗ್ರೆಸ್ ಸದಸ್ಯ ಯು.ಬಿ ವೆಂಕಟೇಶ್ ಖಾಸಗಿ ಬಿಲ್ ವಾಪಸ್ ಪಡೆದುಕೊಂಡರು. ವಿಧಾನ ಪರಿಷತ್ ಖಾಸಗಿ ಸದಸ್ಯರ ಕಾರ್ಯಕಲಾಪದಲ್ಲಿ ಖಾಸಗಿ ನಿರ್ಣಯವನ್ನು ಕಾಂಗ್ರೆಸ್ ಸದಸ್ಯ ಯು.ಬಿ ವೆಂಕಟೇಶ್ ಮಂಡಿಸಿದರು.
ನಿರ್ಣಯ ಕುರಿತು ಉತ್ತರ ನೀಡಿದ ಆರೋಗ್ಯ ಸಚಿವ ಡಾ.ಸುಧಾಕರ್, ಕೇಂದ್ರ ಸರ್ಕಾರ ವಿಶೇಷ ಆಯುಷ್ ಮಂತ್ರಾಲಯ ಮಾಡಿದ್ದಾರೆ. ರಾಜ್ಯದಲ್ಲಿ ಹೊಸ ಆಯುಷ್ ಆಸ್ಪತ್ರೆ ನಿರ್ಮಾಣಕ್ಕೆ ಕಾರ್ಯಕ್ರಮ ರೂಪಿಸಿದ್ದೇವೆ, ಇರುವಂತಹ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ರಾಷ್ಟ್ರೀಯ ಆಯುರ್ವೇದ ವಿದ್ಯಾಪೀಠದಿಂದ ವೈದ್ಯರು,ಅರೆವೈದ್ಯರು, ಸಿಬ್ಬಂದಿಗೆ ತರಬೇತಿ ನೀಡುತ್ತಿದ್ದೇವೆ ಎಂದರು.
ಸಂಶೋಧನೆಗೆ ಒತ್ತು ನೀಡಲು, ಪಶುವೈದ್ಯಕೀಯದಲ್ಲೂ ಆಯುಷ್ ಔಷಧಿ ಬಳಸಲು ಬಜೆಟ್ನಲ್ಲಿ ಘೋಷಿಸಿದ್ದೇವೆ. 108 ಸೇವೆಗಳಲ್ಲಿ ಹೋಂ ಕ್ವಾರಂಟೈನ್ನಲ್ಲಿ ಕೋವಿಡ್ ಸಂದರ್ಭದಲ್ಲೂ ಆಯುಷ್ ಇಲಾಖೆಯ ಎಲ್ಲಾ ಅಧಿಕಾರಿ, ಸಿಬ್ಬಂದಿ, ವಿದ್ಯಾರ್ಥಿಗಳನ್ನು ಬಳಸಿಕೊಂಡಿದ್ದೇವೆ. ಇದು ರಾಷ್ಟ್ರೀಯ ನೀತಿಯಾಗಿರುವುದರಿಂದ ಸ್ಪಷ್ಟ ನೀತಿ ನಿಯಮ ರೂಪಿಸಿದ್ದಾರೆ. ನಾವು ರಾಜ್ಯದಿಂದ ರೂಪಿಸಲು ಬರೋದಿಲ್ಲ, ಅವರೇನಾದರೂ ಸಲಹೆ ನೀಡಿದರೆ ಅದನ್ನ ಸ್ವೀಕರಿಸುತ್ತೇವೆ ಎಂದರು.
ಆಯುರ್ವೇದಕ್ಕೆ ಮಾನ್ಯತೆ ನೀಡಿ : ಸರ್ಕಾರದ ಉತ್ತರಕ್ಕೆ ಕೆಲವೊಂದು ಸ್ಪಷ್ಟೀಕರಣ ಬಯಸಿ ಮಾತನಾಡಿದ ಯು.ಬಿ.ವೆಂಕಟೇಶ್, ನಾನು ಆಯುರ್ವೇದಕ್ಕೆ ಮಾನ್ಯತೆ ಕೊಡಿ ಎಂದು ಕೇಳುತ್ತಿದ್ದೇನೆ. ರಾಜ್ಯದಲ್ಲಿ 57 ಆಯುರ್ವೇದ ಕಾಲೇಜುಗಳಿವೆ. ವರ್ಷ ವರ್ಷ ಸಾವಿರಾರು ವಿದ್ಯಾರ್ಥಿಗಳು ಹೊರ ಬರುತ್ತಾರೆ. ಅವರಿಗೆ ಒಂದು ಡೆತ್ ಸರ್ಟಿಫಿಕೇಟ್ ಕೊಡಲು ಅಧಿಕಾರವಿಲ್ಲ ಎಂದರೆ ಹೇಗೆ? ಅವರಿಗೆ ಸ್ಟೈಫೆಂಡ್ ಏನಾದರೂ ಕೊಡುತ್ತೀರಾ ಎಂದು ಪ್ರಶ್ನಿಸಿದರು.