ಬೆಂಗಳೂರು:ಒಂದನೇ ತರಗತಿಯಿಂದ 8ನೇ ತರಗತಿವರೆಗೂ ಶಾಲೆಗಳನ್ನು ತೆರೆಯಲು ಶಿಕ್ಷಣ ಇಲಾಖೆ ಸಿದ್ಧವಿದೆ. ತಾಂತ್ರಿಕ ಸಲಹಾ ಸಮಿತಿ ನೀಡುವ ಶಿಫಾರಸು ಮತ್ತು ಮುಖ್ಯಮಂತ್ರಿಗಳ ನಿರ್ಧಾರಕ್ಕೆ ಅನುಸಾರವಾಗಿ ಶಾಲೆಗಳನ್ನು ಆರಂಭಿಸಲಾಗುತ್ತದೆ. ನಮ್ಮೆಲ್ಲ ಶಿಕ್ಷಕರು ಶಾಲೆ ಆರಂಭ ಮಾಡಲು ಉತ್ಸುಕರಾಗಿದ್ದಾರೆ ಎಂದು ಪ್ರಾಥಮಿಕ ಹಾಗು ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರಿಂದ ಅಹವಾಲು ಆಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಶಾಲೆಗಳ ಪುನಾರಂಭಕ್ಕೆ ಮುಖ್ಯಮಂತ್ರಿಗಳಿಂದ ಹಿಡಿದು ನಮ್ಮೆಲ್ಲಾ ಸಚಿವರು, ಶಾಸಕರು ತೋರಿದ ಇಚ್ಛಾಶಕ್ತಿ ಪ್ರಕಾರ ಮಕ್ಕಳ ಭಾಗಿತ್ವ ಮತ್ತು ಪೋಷಕರ ಸಹಕಾರ ಸಂಪೂರ್ಣವಾಗಿ ಸಿಕ್ಕಿದೆ. ಶೇ.70 ರಷ್ಟು ಮಕ್ಕಳು ಶಾಲೆಗೆ ಬಂದಿದ್ದಾರೆ. ನೂರಕ್ಕೆ ನೂರರಷ್ಟು ಮಕ್ಕಳು ಭಾಗವಹಿಸುವಂತಹ ಅನೇಕ ಶಾಲೆಗಳು ನಮ್ಮ ಮುಂದಿವೆ. ಈ ಎಲ್ಲಾ ಫೀಡ್ ಬ್ಯಾಕ್ ಆಧಾರದ ಮೇಲೆ ಇಂದು ಸಂಜೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆಯಲಿರುವ ತಾಂತ್ರಿಕ ಸಮಿತಿ ನೀಡುವ ವರದಿಯ ಆಧಾರದಲ್ಲಿ ಮುಂದಿನ ತರಗತಿಗಳನ್ನು ತೆರೆಯುವ ಬಗ್ಗೆ ನಿರ್ಧಾರ ಮಾಡಲಿದ್ದೇವೆ ಎಂದರು.
ಎಲ್ಲ ಶಿಕ್ಷಕರು ಉತ್ಸುಕ..
ತಾಂತ್ರಿಕ ಸಲಹಾ ಸಮಿತಿ ಸಲಹೆಗಳನ್ನು ನೀಡಿ, ಹೊಸ ಮಾರ್ಗಸೂಚಿ ಕೊಟ್ಟು ಶಾಲೆಗಳನ್ನು ಆರಂಭ ಮಾಡಲು ಸೂಚಿಸಿದರೆ ಶಿಕ್ಷಣ ಇಲಾಖೆ ಅದಕ್ಕೆ ಸಿದ್ಧವಿದೆ. ನಮ್ಮೆಲ್ಲ ಶಿಕ್ಷಕರು ಶಾಲೆ ಆರಂಭಿಸಲು ಉತ್ಸುಕರಾಗಿದ್ದಾರೆ. ಪೋಷಕರು ಕಚೇರಿಗೆ ಬಂದು ಶಾಲೆಗಳನ್ನು ಯಾಕೆ ಆರಂಭಿಸುತ್ತಿಲ್ಲ ಎಂದು ಕೇಳುತ್ತಿದ್ದಾರೆ ಎನ್ನುವ ಮಾಹಿತಿಯನ್ನು ಡಿಡಿಪಿಐಗಳು ನನಗೆ ಮಾಹಿತಿ ನೀಡಿದ್ದಾರೆ. ಈ ಎಲ್ಲಾ ಮಾಹಿತಿಯನ್ನು ಇಂದು ಸಂಜೆ ನಡೆಯುವ ತಾಂತ್ರಿಕ ಸಲಹಾ ಸಮಿತಿ ಸಭೆಯ ಮುಂದಿಡುತ್ತೇವೆ. ಅವರು ಏನು ಸೂಚನೆ ಕೊಡುತ್ತಾರೆ. ಅದರ ಆಧಾರದ ಮೇಲೆ ಮುಖ್ಯಮಂತ್ರಿಗಳು ತೆಗೆದುಕೊಳ್ಳುವ ನಿರ್ಧಾರದಂತೆ ಶಿಕ್ಷಣ ಇಲಾಖೆ ಮುಂದಿನ ಹೆಜ್ಜೆ ಇಡಲಿದೆ ಎಂದು ತಿಳಿಸಿದರು.
9 ರಿಂದ 12ನೇ ತರಗತಿ ಪುನಾರಂಭದ ಬಳಿಕ ಕೋವಿಡ್ ಪತ್ತೆಯಾಗಿಲ್ಲ..
9ನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗೂ ಶಾಲೆಗಳನ್ನು ತೆರೆದಿದ್ದೇವೆ. ಅಲ್ಲಿ ಕೂಡ ಯಾರಿಗೂ ಭೌತಿಕ ತರಗತಿಗೆ ಕಡ್ಡಾಯ ಹಾಜರಾತಿಯ ಬಲವಂತವಿಲ್ಲ, ಅವಕಾಶವನ್ನು ಮುಕ್ತವಾಗಿರಿಸಿದ್ದೇವೆ. ಮಕ್ಕಳು ಹಾಗೂ ಪೋಷಕರು ಕೊಟ್ಟಿರುವ ಪ್ರೋತ್ಸಾಹ ನೋಡಿದರೆ ಶಾಲೆಗಳಿಗೆ ಬರುವುದಕ್ಕೆ ಹೆಚ್ಚು ಉತ್ಸಾಹ ತೋರುತ್ತಿರುವುದು ಸ್ಪಷ್ಟವಾಗಿದೆ. ಅಲ್ಲದೆ, ಶಾಲೆ ಆರಂಭದ ನಂತರ ಇದುವರೆಗೂ ಒಂದೇ ಒಂದು ಕೋವಿಡ್ ಪ್ರಕರಣ ನಮಗೆ ವರದಿಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.