ಬೆಂಗಳೂರು:ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆದ ದ್ವೈವಾರ್ಷಿಕ ಚುನಾವಣೆಯಲ್ಲಿ ಟಿಕೆಟ್ ಗಿಟ್ಟಿಸಿಕೊಂಡು ಎರಡನೇ ಬಾರಿ ವಿಧಾನ ಪರಿಷತ್‌ಗೆ ಆಯ್ಕೆಯಾಗಿರುವ ಮಾಜಿ ಸಚಿವ ಲಕ್ಷ್ಮಣ್ ಸವದಿ ನಿನ್ನೆ (ಸೋಮವಾರ) ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಅವಕಾಶ ನೀಡಿದ್ದಕ್ಕಾಗಿ ಧನ್ಯವಾದ ಹೇಳಿದ್ದಾರೆ.
ವಿಧಾನಸಭೆಯಿಂದ ವಿಧಾನ ಪರಿಷತ್ನ 7 ಸ್ಥಾನಕ್ಕೆ ಅವಿರೋಧ ಆಯ್ಕೆಯಾದ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಲಕ್ಷ್ಮಣ್ ಸವದಿ ವರಿಷ್ಠರ ಭೇಟಿಗಾಗಿ ನವದೆಹಲಿಗೆ ತೆರಳಿದ್ದರು. ಈ ಸಂದರ್ಭದಲ್ಲಿ ಜೆ.ಪಿ.ನಡ್ಡಾ, ಅಮಿತ್ ಶಾ, ರಾಜನಾಥ್ ಸಿಂಗ್ ಹಾಗು ಸ್ಮೃತಿ ಇರಾನಿ ಅವರನ್ನು ಭೇಟಿಯಾಗಿ ಕೆಲಕಾಲ ಮಾತುಕತೆ ನಡೆಸಿದರು.
ವಿಧಾನಸಭಾ ಚುನಾವಣೆಯಲ್ಲಿ ಪರಾಜಿತಗೊಂಡರೂ ಹೈಕಮಾಂಡ್ ಕೃಪೆಯಿಂದ ಉಪಮುಖ್ಯಮಂತ್ರಿ ಸ್ಥಾನ ಅಲಂಕರಿಸಿ ಮೊದಲ ಬಾರಿ ಪರಿಷತ್ ಸದಸ್ಯರಾಗಿದ್ದ ಸವದಿ ಅವರಿಗೆ ಪರಿಷತ್‌ಗೆ ಹೈಕಮಾಂಡ್ ಎರಡನೇ ಬಾರಿ ಅವಕಾಶ ನೀಡಿದೆ. ಕೊನೆ ಕ್ಷಣದಲ್ಲಿ ಹೆಸರು ಪ್ರಕಟಿಸಿ ಸವದಿಗೆ ಮಣೆ ಹಾಕಲಾಗಿತ್ತು.
ಸಿಎಂಗೆ ಸಿಗದ ನಡ್ಡಾ:ಸಚಿವ ಸಂಪುಟ ವಿಸ್ತರಣೆ ಕುರಿತು ಮಾತುಕತೆ ನಡೆಸಲು ದೆಹಲಿಗೆ ಅಲೆದಾಡಿದರೂ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಿಕ್ಕಿರಲಿಲ್ಲ. ಅಮಿತ್ ಶಾ, ಜೆ.ಪಿ.ನಡ್ಡಾ, ರಾಜನಾಥ್ ಸಿಂಗ್ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡುವುದೇ ಸಿಎಂಗೆ ಕಷ್ಟವಾಗಿತ್ತು. ಒಬ್ಬರು ಸಿಕ್ಕರೆ ಮತ್ತೊಬ್ಬರು ಸಿಗದೆ ವಾಪಸ್ ಆಗುತ್ತಿದ್ದರು. ಆದರೆ ಲಕ್ಷ್ಮಣ್ ಸವದಿಗೆ ಮೂವರು ನಾಯಕರು ಒಟ್ಟಿಗೆ ಸಿಕ್ಕಿದ್ದಾರೆ!. ಏಕಕಾಲಕ್ಕೆ ವರಿಷ್ಠ ನಾಯಕರ ಭೇಟಿಗೆ ಸಿಎಂಗೆ ಸಿಗದ ಕಾಲಾವಕಾಶ ಸವದಿಗೆ ಸಿಕ್ಕಿರುವುದು ರಾಜ್ಯ ಬಿಜೆಪಿ ಪಾಳಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ:ವಿಧಾನಪರಿಷತ್ ಚುನಾವಣೆ : ಏಳೂ ಅಭ್ಯರ್ಥಿಗಳು ಅವಿರೋಧ ಆಯ್ಕೆ