ಬೆಂಗಳೂರು:ಸ್ನೇಹಿತೆಯ ಮನೆಯಲ್ಲಿ ತಡರಾತ್ರಿ ಪಾರ್ಟಿ ಮುಗಿಸಿಕೊಂಡು ಕ್ಯಾಬ್ನಲ್ಲಿ ಬರುವಾಗ ಯುವತಿಯೊಂದಿಗೆ ಅಸಭ್ಯ ವರ್ತನೆ ತೋರಿ ಅತ್ಯಾಚಾರ ಎಸಗಿರುವ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಯುವತಿ ನೀಡಿದ ದೂರಿನ ಮೇರೆಗೆ ಜೀವನ್ ಭೀಮಾ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕ್ಯಾಬ್ ಚಾಲಕನನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.
ಆಂಧ್ರ ಪ್ರದೇಶದ ಚಿತ್ತೂರು ಮೂಲದ ದೇವರಾಜಲು (25) ಬಂಧಿತ ಆರೋಪಿ. ಘಟನೆ ಬಳಿಕ ನಗರದ ಹೊರವಲಯದಲ್ಲಿ ಅಡಗಿಕೊಂಡಿರುವ ಮಾಹಿತಿ ಆಧರಿಸಿ ಪ್ರಕರಣ ಸಂಬಂಧ ರಚಿಸಲಾಗಿದ್ದ ಮೂರು ವಿಶೇಷ ತಂಡ ರಚಿಸಲಾಗಿತ್ತು. ಈ ವೇಳೆ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅವಿವಾಹಿತನಾಗಿರುವ ದೇವರಾಜಲು ನಗರದ ಆವಲಹಳ್ಳಿಯಲ್ಲಿ ವಾಸವಾಗಿದ್ದಾನೆ. ಕಳೆದ ಎರಡು ವರ್ಷಗಳಿಂದ ಉಬರ್ ಚಾಲಕನಾಗಿ ಕೆಲಸ ಮಾಡುತ್ತಿದ್ದಾನೆ. ಎಂದಿನಂತೆ ಮಂಗಳವಾರ ಮಧ್ಯರಾತ್ರಿ ಕೆಲಸದಲ್ಲಿ ನಿರತನಾಗಿದ್ದ. ಇದೇ ವೇಳೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಹೆಚ್ಎಸ್ಆರ್ ಲೇಔಟ್ ನಲ್ಲಿರುವ ಗೆಳತಿ ಮನೆಯಲ್ಲಿ ಪಾರ್ಟಿ ಮುಗಿಸಿ ತಡರಾತ್ರಿ 2 ಗಂಟೆ ವೇಳೆಗೆ ಮುರುಗೇಶ್ ಪಾಳ್ಯಕ್ಕೆ ಹೋಗಲು ಕ್ಯಾಬ್ ಬುಕ್ ಮಾಡಿದ್ದಳು.
ಇದರಂತೆ ಚಾಲಕ ದೇವರಾಜ್ ಯುವತಿಯನ್ನು ಕ್ಯಾಬ್ ಹತ್ತಿಸಿಕೊಂಡಿದ್ದಾನೆ. ಮನೆ ಬಳಿ ಬರುವಾಗ ತನ್ನ ಮೇಲೆ ಚಾಲಕ ದೌರ್ಜನ್ಯ ನಡೆಸಿ ಆತ್ಯಾಚಾರ ಎಸಗಿದ್ದಾನೆ. ಈ ಸಂಬಂಧ ಚಾಲಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂತ್ರಸ್ತೆ ದೂರು ನೀಡಿದ್ದಳು.