ಬೆಂಗಳೂರು: ಸ್ವಾತಂತ್ರ್ಯ ಹೋರಾಟ ನಡೆಸಿದ ಪ್ರಥಮ ವೀರ ಮಹಿಳೆ ಕಿತ್ತೂರು ರಾಣಿ ಚೆನ್ನಮ್ನ ಹಾಗೂ ಸಂಗೊಳ್ಳಿ ರಾಯಣ್ಣಗೆ ಮೊದಲು ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಬೇಕು ಎಂದು ಪಂಚಮಸಾಲಿ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಸಾವರ್ಕರ್ಗೂ ಮೊದಲು ಚೆನ್ನಮ್ಮ, ರಾಯಣ್ಣಗೆ ಭಾರತ ರತ್ನ ನೀಡಿ: ಜಯಮೃತ್ಯುಂಜಯ ಸ್ವಾಮೀಜಿ
ವೀರ ಸಾವರ್ಕರ್ಗೂ ಮೊದಲು ಕಿತ್ತೂರು ರಾಣಿ ಚೆನ್ನಮ್ನ ಹಾಗೂ ಸಂಗೊಳ್ಳಿ ರಾಯಣ್ಣಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಬೇಕು ಎಂದು ಪಂಚಮಸಾಲಿ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶ್ರೀಗಳು, ಭಾರತ ರತ್ನ ನೀಡುವ ಸಂದರ್ಭದಲ್ಲಿ ಉತ್ತರ ಭಾರತೀಯರಿಗೆ ಮಾತ್ರ ಆದ್ಯತೆ ನೀಡಲಾಗುತ್ತಿದೆ. ಝಾನ್ಸಿ ರಾಣಿ ಲಕ್ಷ್ಮೀ ಬಾಯಿ ಎಲ್ಲರಿಗೂ ಗೊತ್ತು, ಆದರೆ ಝಾನ್ಸಿ ರಾಣಿಗೂ ಮೊದಲೇ ಹೋರಾಟ ಮಾಡಿದ್ದ ವೀರ ಮಹಿಳೆ ರಾಣಿ ಚೆನ್ನಮ್ಮ. ಆದರೆ, ಅವರನ್ನು ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ. ಹಾಗಾಗಿ ದಕ್ಷಿಣ ಭಾರತೀಯರ ಅದರಲ್ಲೂ ಪ್ರಮುಖವಾಗಿ ಕನ್ನಡಿಗರ ಹೋರಾಟವನ್ನು ಇಡೀ ರಾಷ್ಟ್ರಕ್ಕೆ ಪರಿಚಯಿಸಬೇಕಾದರೆ ಕಿತ್ತೂರು ರಾಣಿ ಚೆನ್ನಮ್ಮಗೆ ಹಾಗೂ ಜೊತೆಗೆ ಸಂಗೊಳ್ಳಿ ರಾಯಣ್ಣಗೂ ಭಾರತ ರತ್ನ ನೀಡಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಧಾರ್ಮಿಕ ಕ್ಷೇತ್ರದವರಿಗೆ ಭಾರತ ರತ್ನ ಪರಿಗಣಿಸುವುದಾದರೆ ಡಾ.ಶಿವಕುಮಾರ ಸ್ವಾಮೀಜಿಯವರಿಗೆ ಹಾಗೂ ಸ್ವಾತಂತ್ರ್ಯ ಹೋರಾಟಗಾರರಿಗೆ ಕೊಡುವುದಾದರೆ ಕಿತ್ತೂರು ಚೆನ್ನಮ್ಮನಿಗೆ ಕೊಡಬೇಕು. ಸಿದ್ದಗಂಗಾ ಶ್ರೀಗಳು ವಿಶ್ವರತ್ನ, ಅವರಿಗೆ ಭಾರತ ರತ್ನ ಪ್ರಶಸ್ತಿ ಕೊಡಬೇಕು ಎಂಬುದು ಹತ್ತು ಹದಿನೈದು ವರ್ಷಗಳ ಬೇಡಿಕೆ ಎಂದ ಅವರು, ಮುಂಬೈ ಕರ್ನಾಟಕವನ್ನ ಕಿತ್ತೂರು ಕರ್ನಾಟಕ ಎಂದು ಘೋಷಿಸಬೇಕು ಹಾಗೂ ಇಂಗ್ಲೆಂಡಿನಲ್ಲಿರುವ ಕಿತ್ತೂರು ಚೆನ್ನಮ್ಮನ ಖಡ್ಗವನ್ನು ವಾಪಸ್ ತರುವ ಪ್ರಯತ್ನ ಮಾಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.