ಬೆಂಗಳೂರು :ಮಹಿಳೆಯರನ್ನ ಭೋಗದ ವಸ್ತು ಎಂದು ಬಿಜೆಪಿಯವರು ತಿಳಿದುಕೊಂಡಿದ್ದಾರೆ. ರಮೇಶ್ ಜಾರಕಿಹೊಳಿಗೆ ಇರೋದು ಇಬ್ಬರು ಗಂಡು ಮಕ್ಕಳು. ಹಾಗಾಗಿ, ಅವರಿಗೆ ಹೆಣ್ಣಿನ ನೋವು ಅರ್ಥ ಆಗಲ್ಲ ಎಂದು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ. ಪುಷ್ಪ ಅಮರನಾಥ್ ಕಿಡಿಕಾರಿದರು.
ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿಡಿ ಪ್ರಕರಣದ ಹೆಣ್ಣುಮಗಳಿಗೆ ನ್ಯಾಯ ಸಿಗಬೇಕು. ಅವರ ತಂದೆ-ತಾಯಿ ಮೇಲೆ ದಬ್ಬಾಳಿಕೆ ಮಾಡ್ತಿದ್ದಾರೆ. ಜೀವ ಭಯ ಇರೋ ಹೆಣ್ಣು ಯಾವ ಧೈರ್ಯದಿಂದ ಬಂದು ಹೇಳಿಕೆ ನೀಡೋಕೆ ಸಾಧ್ಯ.
ಡಿಕೆಶಿಯವರ ಮೇಲೆ ಆರೋಪ ಹೊರಿಸೋಕೆ ಆಗಲ್ಲ ಎಂದು ಬಿಜೆಪಿ ಸಚಿವೆ ಶಶಿಕಲಾ ಜೊಲ್ಲೆ ಅವರೇ ಹೇಳಿದ್ದಾರೆ. 24 ದಿನದಿಂದ ನಡೀತಿರೋ ಹೈಡ್ರಾಮಾಗೆ ಕೊನೆ ಯಾವಾಗ ಎಂದು ಪ್ರಶ್ನಿಸಿದರು.
ಹೆಣ್ಣು ಮಕ್ಕಳಿಲ್ಲದ ರಮೇಶ್ ಜಾರಕಿಹೊಳಿಗೆ ಹೆಣ್ಣಿನ ನೋವು ಅರ್ಥ ಆಗಲ್ಲ.. ಯುವತಿ ರಕ್ಷಣೆ ವಹಿಸುವಲ್ಲಿ ಸರ್ಕಾರ, ಗೃಹ ಸಚಿವರು ಮೌನ ವಹಿಸಿದ್ದಾರೆ :ಮಹಿಳೆಯರಿಗೆ ರಕ್ಷಣೆ ಇಲ್ಲ ಅಂದ್ರೇ ಯಾವ ಧೈರ್ಯದಿಂದ ಹೊರಗೆ ಬರ್ತಾರೆ. ಆ ಯುವತಿ ತಮಗೆ ಭಯ ಇದೆ, ರಕ್ಷಣೆ ಇಲ್ಲ ಅಂತಾ ಹೇಳ್ತಿದ್ದಾಳೆ. ಆದ್ರೆ, ಸರ್ಕಾರ ಯಾವುದೇ ರಕ್ಷಣೆ ಕೊಡ್ತಿಲ್ಲ.
ತಾಯಿ ಸ್ಥಾನದಲ್ಲಿರೋ ಸರ್ಕಾರ, ಗೃಹ ಸಚಿವರು, ಪೊಲೀಸರು ಯಾರು ಕೂಡ ಒಂದೇ ಒಂದು ಧೈರ್ಯದ ಮಾತು ಹೇಳಿಲ್ಲ. ಈ ವಿಚಾರದಲ್ಲಿ ಯಾಕೆ ಮೌನವಹಿಸಿದ್ದೀರಾ ಎಂದು ಗುಡುಗಿದರು.
ಬೇಟಿ ಬಚಾವೋ ಅಲ್ಲ, ಬಿಜೆಪಿಯ ನಾಯಕೋಂಕೋ ಬಚಾವ್ :ಗೃಹ ಸಚಿವರಿಗೆ ಕೇಳ್ತೀನಿ. ಯಾರನ್ನ ರಕ್ಷಣೆ ಮಾಡ್ತಿದ್ದೀರಾ? ಬೇಟಿ ಬಚಾವೋ, ಬೇಟಿ ಪಡಾವೋ ಅನ್ನೋದನ್ನ ಬಿಜೆಪಿಯವರು ಯಾಕ್ ತಂದ್ರಿ. ನೀವು ಅದನ್ನ ಬದಲಾಯಿಸಿ. ಬೇಟಿ ಬಚಾವೋ ಅಲ್ಲ, ಬಿಜೆಪಿಯ ನಾಯಕೋಂಕೋ ಬಚಾವ್ ಅಂತಾ ಮಾಡಿ.
ಮಹಿಳಾ ಆಯೋಗ ಕೂಡ ಕಣ್ಮುಚ್ಚಿ ಕುಳಿತಿದೆ. ಮೊದಲ ವಿಡಿಯೋ ರಿಲೀಸ್ ಆದ್ಮೇಲೆ ಆಕೆಯ ನೆರವಿಗೆ ನಿಲ್ತೇನೆ ಅಂತಾ ಮಹಿಳಾ ಆಯೋಗದ ಅಧ್ಯಕ್ಷರು ಹೇಳಿದ್ರು. ಆದ್ರೆ, ಈವರೆಗೂ ಏನು ಕ್ರಮ ತೆಗೆದುಕೊಂಡಿಲ್ಲ ಎಂದರು.
ಯುವತಿಯ ಪೋಷಕರ ದಿಕ್ಕುತಪ್ಪಿಸ್ತಿದ್ದಾರೆ :ಯುವತಿಯ ಪೋಷಕರಿಗೆ ಕೇಳ್ತೀನಿ, ಮಗಳ ಮೇಲೆ ಈ ರೀತಿ ಮಾಡಿರೋ ಆರೋಪಿಯ ಪರ ನಿಲ್ತಿರಲ್ಲ ಸರಿನಾ? ಆರೋಪಿಯ ಮನೆಯಲ್ಲಿದ್ದೀರಾ ಅವರ ಆಮಿಷಕ್ಕೊಳಗಾಗಿ ಈ ರೀತಿ ಹೇಳಿಕೆ ನೀಡೋದು ಸರಿನಾ? ನಿಮ್ಮ ಮಗಳಿಗೆ ನ್ಯಾಯ ಸಿಗಬೇಕು, ಆರೋಪಿ ಜತೆಗೆ ಕೈಜೋಡಿಸೋ ರೀತಿ ಹೇಳಿಕೆ ನೀಡೋದು ಸರಿಯಲ್ಲ.
ಎಸ್‌ಐಟಿಯಿಂದ ನ್ಯಾಯ ಸಿಗುತ್ತೆ ಅನ್ನೋ ನಂಬಿಕೆ ಇಲ್ಲ. ಮೊನ್ನೆ ನ್ಯಾಯ ಕೇಳೋಕೆ ಹೋದವರ ಮೇಲೆ ಪೈಶಾಚಿಕ ರೀತಿ ನಡೆದುಕೊಂಡಿದ್ದಾರೆ. ಇದು ನ್ಯಾಯವಾ? ರಾಮನ ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ಇದ್ಯಾ? ಎಂದು ಪ್ರಶ್ನಿಸಿದರು. ಅಲ್ಲದೆ, ಯುವತಿಗೆ ಝಡ್+ ಭದ್ರತೆ ಒದಗಿಸಿ ಆಕೆಯನ್ನ ಕೋರ್ಟ್ಗೆ ಕರೆಸಿಕೊಳ್ಳಬೇಕು. ಆಗ ಮಾತ್ರ ಅವಳಿಗೆ ಸುರಕ್ಷತೆ ಸಿಗಲು ಸಾಧ್ಯ ಎಂದರು.
ಗಂಡಸು ಅಂದ್ರೆ ಎನ್ ಬೇಕಾದ್ರು ಮಾಡ್ಬಹುದಾ?:ಕಾಂಗ್ರೆಸ್ ನಾಯಕಿ ವೀಣಾ ಕಾಶಪ್ಪನವರ್ ಮಾತನಾಡಿ, ನಾನು ಗಂಡಸು ಅಂತಾ ಹೇಳ್ಕೊಂಡು ರಾಜಾರೋಷವಾಗಿ ತಿರುಗಾಡ್ಕೊಂಡಿದ್ದಾರೆ. ಗಂಡಸು ಆಗಿ ಏನ್ ಬೇಕಾದ್ರೂ ಮಾಡಬಹುದಾ? ಇದಕ್ಕೆ ಸರ್ಕಾರದ ಒಪ್ಪಿಗೆ ಇದ್ಯಾ, ಮುಖ್ಯಮಂತ್ರಿಗಳ ಒಪ್ಪಿಗೆ ಇದ್ಯಾ? ಆದಷ್ಟು ಬೇಗ ಸರ್ಕಾರ ಸಂತ್ರಸ್ತೆಗೆ ನ್ಯಾಯ ಒದಗಿಸಿಕೊಡಲಿ ಎಂದರು.