ಬೆಂಗಳೂರು:ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಚಿಸಲಾದ ವಿಶೇಷ ತನಿಖಾ ತಂಡ ಕಾರ್ಯಪ್ರವೃತ್ತವಾಗಿದ್ದು, ಐವರನ್ನು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದೆ.
ಪ್ರಕರಣದ ದೂರುದಾರನಾಗಿರುವ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿಗೆ ವಿಡಿಯೋ ನೀಡಿರುವ ವ್ಯಕ್ತಿ, ರಾಮನಗರ ಹಾಗೂ ವಿಜಯನಗರ ಮತ್ತು ಚಿಕ್ಕಮಗಳೂರು ಮೂಲದ ಶಂಕಿತ ಆರೋಪಿಗಳನ್ನು ತನಿಖಾ ತಂಡ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ ಎನ್ನಲಾಗಿದೆ.
ಎಸ್ಐಟಿ ವಶದಲ್ಲಿರುವ ಓರ್ವ, ಯುವತಿಯ ಜೊತೆ ನಿರಂತರ ಸಂಪರ್ಕದಲ್ಲಿದ್ದ ಎನ್ನುವುದು ತಿಳಿದುಬಂದಿದೆ. ವಶಕ್ಕೆ ಪಡೆದುಕೊಂಡಿದ್ದವರು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಬಳಿಕ ಹೊಸ ನಂಬರ್ನಿಂದ ಸಂಪರ್ಕದಲ್ಲಿದ್ದರು.
ರಾಮನಗರದ ಓರ್ವ ಯುವತಿಯನ್ನು ಎಸ್ಐಟಿ ವಶಕ್ಕೆ ಪಡೆದಿದೆ ಎಂದು ತಿಳಿದುಬಂದಿದೆ. ಬೆಂಗಳೂರು ಮೂಲದ ಯುವಕ ಈ ಯುವತಿಗೆ ಸಿಡಿ ಕೊಟ್ಟಿದ್ದು, ಬಳಿಕ ಯುವತಿ ಕಲ್ಲಹಳ್ಳಿಗೆ ಸಿಡಿ ಕೊಟ್ಟಿರೋ ಶಂಕೆ ವ್ಯಕ್ತವಾಗುತ್ತಿದೆ.
ಯುವತಿಯ ಜೊತೆಗೆ ಸಂಪರ್ಕದಲ್ಲಿದ್ದ ಮತ್ತೊಬ್ಬನೂ ಎಸ್ಐಟಿ ವಶಕ್ಕೆ ಪಡೆದು ಮಾಹಿತಿ ಕಲೆ ಹಾಕಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸದ್ಯ ಎಸ್ಐಟಿ ಕಚೇರಿಯಲ್ಲಿ ಓರ್ವನಿಗೆ ಅಧಿಕಾರಿಗಳು ತೀವ್ರ ವಿಚಾರಣೆ ಒಳಪಡಿಸಿದ್ದಾರೆ. ಇನ್ನುಳಿದ ನಾಲ್ವರನ್ನು ಬೆಂಗಳೂರಿಗೆ ಕರೆತರಲಾಗುತ್ತಿದೆ.
ದಿನೇಶ್ ಕಲ್ಲಹಳ್ಳಿ ನೀಡಿದ ಅರ್ಜಿ ಮೇರೆಗೆ ಪೊಲೀಸರು ಮಾಹಿತಿ ಕಲೆ ಹಾಕಿದ್ದರು. ಎಸ್ಐಟಿಗೂ ಮೊದಲು ಸಾಕಷ್ಟು ಮಾಹಿತಿ ಕಲೆ ಹಾಕಲಾಗಿತ್ತು. ಸಿಡಿಯ ಹಿಂದೆ ಯಾರ್ಯಾರ ಕೈವಾಡ ಇದೆ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಿದ್ದರು. ದಿನೇಶ್ ಕಲ್ಲಹಳ್ಳಿ ಮೊಬೈಲ್ ಸಂಪರ್ಕದ ಮಾಹಿತಿಯನ್ನೂ ಕೂಡ ಪೊಲೀಸರು ಸಂಗ್ರಹಿಸಿದ್ದರು.