ಬೆಂಗಳೂರು:ರಾಜ್ಯ ಸರ್ಕಾರ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಲು ಮುಂದಾಗಿದ್ದು, ಇದು ಗ್ರಾಮೀಣ ಮಟ್ಟದ ಮಕ್ಕಳಿಗೆ ಕಷ್ಟ ಸಾಧ್ಯವಾಗಲಿದೆ ಎಂದು ರಾಜ್ಯಸಭೆ ಕಾಂಗ್ರೆಸ್ ಸದಸ್ಯ ಡಾ. ಎಲ್. ಹನುಮಂತಯ್ಯ ಅಭಿಪ್ರಾಯಪಟ್ಟಿದ್ದಾರೆ.
ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ವಿಧಾನಪರಿಷತ್ ಸದಸ್ಯ ಪಿ.ಆರ್. ರಮೇಶ್ ಜತೆ ಜಂಟಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, 8.75 ಲಕ್ಷ ಮಕ್ಕಳ ಭವಿಷ್ಯವನ್ನು ನಿರ್ಧರಿಸಲು ಸರ್ಕಾರ ಮುಂದಾಗಿದೆ. ಉನ್ನತ ಶಿಕ್ಷಣಕ್ಕೆ ಕಾಲಿರಿಸುವ ಪಿಯುಸಿ ಮಕ್ಕಳ ಪರೀಕ್ಷೆ ರದ್ದುಪಡಿಸಿರುವ ಸರ್ಕಾರ ಎಸ್ಎಸ್ಎಲ್ಸಿ ಪರೀಕ್ಷೆ ಮಾತ್ರ ನಡೆಸಲು ಸಜ್ಜಾಗಿದೆ. ಮಕ್ಕಳ ಮೇಲೆ ಇಷ್ಟು ಒತ್ತಡ ಹೇರುವುದು ಅಕ್ಷಮ್ಯ ಅಪರಾಧ. ತಜ್ಞರು ಪರೀಕ್ಷೆ ನಡೆಸುವುದು ಸರಿಯಲ್ಲ ಎನ್ನುವಾಗ ಅಧಿಕಾರಿಗಳ ಮಾತು ಕೇಳಿ ಸಚಿವ ಸುರೇಶ್ ಕುಮಾರ್ ಮುಂದಾಗಿರುವುದು ಸರಿಯಲ್ಲ. ಗ್ರಾಮೀಣ ಭಾಗದ ಶೇ.80 ರಷ್ಟು ಮಕ್ಕಳಿಗೆ ಆನ್ಲೈನ್ ಶಿಕ್ಷಣದ ಪ್ರಯೋಜನ ಸಿಕ್ಕಿಲ್ಲ. ಪರೀಕ್ಷೆ ಎದುರಿಸುವುದು ಕಷ್ಟ. ಈ ಪರೀಕ್ಷೆ ಮಕ್ಕಳ ಮೇಲೆ ಆಗುತ್ತಿರುವ ಹಲ್ಲೆ ಎಂದರು.
ಶಿಕ್ಷಣ ಒಂದು ದಂಧೆಯಾಗಿದೆ. ಇದನ್ನು ಸರ್ಕಾರ ತಡೆಯಬೇಕು. ಶಿಕ್ಷಣ ಸಚಿವ ಸುರೇಶ್ ಕುಮಾರ್, ಕೂಡಲೇ ಶಿಕ್ಷಣ ತಜ್ಞರು, ಸರ್ವ ಪಕ್ಷ ಸದಸ್ಯರ ಸಭೆ ಕರೆಯಬೇಕು. ಶೈಕ್ಷಣಿಕ ವರ್ಷವನ್ನು ಎರಡು ತಿಂಗಳು ಮುಂದೂಡಬೇಕು. ಮಕ್ಕಳಿಗೆ ವ್ಯಾಕ್ಸಿನೇಷನ್ ಮಾಡಿಸಿ. ಪ್ರತಿ ಶಾಸಕರು ತಮ್ಮ ವ್ಯಾಪ್ತಿಯಲ್ಲಿರುವ ಮಕ್ಕಳಿಗೆ ಶಾಸಕ ನಿಧಿಯಿಂದ ಮೊಬೈಲ್ ಕೊಡಿಸಿ. ನಾನು ಸಹ ಸರ್ಕಾರ ಸೂಚಿಸುವ ಭಾಗದ ಮಕ್ಕಳಿಗೆ ಮೊಬೈಲ್ ಕೊಡಲು ಸಿದ್ಧ. ಪ್ರಧಾನಿ ನರೇಂದ್ರ ಮೋದಿ ಮಕ್ಕಳೊಂದಿಗೆ ಮಾತನಾಡುತ್ತೇನೆ ಎಂದು ಪ್ರಚಾರ ಗಿಟ್ಟಿಸುತ್ತಿದ್ದಾರೆ. ಗ್ರಾಮೀಣ ಮಕ್ಕಳ ಜತೆ ಸಮಾಲೋಚಿಸಲಿ. 8.75 ಲಕ್ಷ ಎಸ್ಎಸ್ಎಲ್ಸಿ, 6 ಲಕ್ಷ ಪಿಯುಸಿ ಮಕ್ಕಳ ಭವಿಷ್ಯವನ್ಮು ಸರ್ಕಾರ ಪಣಕ್ಕಿಡಲು ಮುಂದಾಗಿದೆ. ಇದು ಸರಿಯಲ್ಲ ಎಂದರು.