ಬೆಂಗಳೂರು: ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಜೂನ್ 10 ರಂದು ನಡೆಯಲಿರುವ ಚುನಾವಣೆಯಲ್ಲಿ ಮೂರು ರಾಜಕೀಯ ಪಕ್ಷಗಳಿಂದ ಆರು ಮಂದಿ ಅಭ್ಯರ್ಥಿಗಳು ಕಣಕ್ಕಿಳಿದಿದ್ದು, ಇರುವ 4ನೇ ಸ್ಥಾನಕ್ಕಾಗಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪೈಪೋಟಿ ನಡೆಸಬೇಕಾಗಿದೆ.
ಬಿಜೆಪಿಯಿಂದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ನಟ ಜಗ್ಗೇಶ್ ಅವರ ಜೊತೆ ಲೆಹರ್ ಸಿಂಗ್ ಅವರು ನಾಮಪತ್ರ ಸಲ್ಲಿಸಿದ್ದು, ಕಾಂಗ್ರೆಸ್ ಪಕ್ಷದಿಂದ ಜೈರಾಮ್ ರಮೇಶ್, ಮನ್ಸೂರ್ ಅಲಿ ಖಾನ್ ಹಾಗೂ ಜೆಡಿಎಸ್ ನಿಂದ ಕುಪೇಂದ್ರ ರೆಡ್ಡಿ ಕಣದಲ್ಲಿದ್ದಾರೆ. ಬಿಜೆಪಿಗೆ 122 ಶಾಸಕ ಬಲವಿದ್ದು, ಪ್ರತಿಪಕ್ಷ ಕಾಂಗ್ರೆಸ್ಗೆ 70 ಹಾಗೂ ಜೆಡಿಎಸ್ ಪಕ್ಷಕ್ಕೆ 32 ಶಾಸಕ ಬಲವಿದೆ.
ಬಿಜೆಪಿ ತನ್ನ ಇಬ್ಬರು ಅಭ್ಯರ್ಥಿಗಳಿಗೆ ತಲಾ 45 ಮತಗಳನ್ನು ಕೊಟ್ಟರೆ ಅದರ ಮೂರನೇ ಅಭ್ಯರ್ಥಿಗೆ 32 ಮತಗಳು ಉಳಿಯುತ್ತವಾದರೂ, ಯಾವುದೇ ಮೂಲೆಯಿಂದ ಹೊಡೆತ ಬೀಳಬಾರದು ಎಂಬ ಕಾರಣಕ್ಕಾಗಿ ಮೊದಲ ಇಬ್ಬರು ಅಭ್ಯರ್ಥಿಗಳಿಗೆ ಒಂದೋ, ಎರಡೋ ಹೆಚ್ಚುವರಿ ಮತಗಳನ್ನು ನಿಗದಿಪಡಿಸುತ್ತದೆ. ಅದೇ ರೀತಿ ಕಾಂಗ್ರೆಸ್ ಪಕ್ಷ ಕೂಡಾ ತನ್ನ ಮೊದಲ ಅಭ್ಯರ್ಥಿಯ ಸುರಕ್ಷತೆಯ ದೃಷ್ಟಿಯಿಂದ ಗೆಲುವಿಗೆ ಬೇಕಾದ 45 ಮತಗಳ ಜೊತೆ ಇನ್ನೂ ಕೆಲ ಮತಗಳನ್ನು ಹೆಚ್ಚುವರಿಯಾಗಿ ನಿಗದಿಪಡಿಸುತ್ತದೆ.
ಇನ್ನು ಜೆಡಿಎಸ್ ಪಕ್ಷ ತನ್ನ ಬುಟ್ಟಿಯಲ್ಲಿರುವ 32 ಮತಗಳನ್ನು ಕುಪೇಂದ್ರ ರೆಡ್ಡಿ ಅವರಿಗೆ ನಿಗದಿಪಡಿಸಿದರೂ ಗೆಲುವಿಗೆ 13 ಮತಗಳ ಕೊರತೆಯಾಗುತ್ತದೆ. ಜೆಡಿಎಸ್ ಪಕ್ಷವು ಬಿಜೆಪಿ ಜತೆ ಹೋಗುತ್ತದೆಯೇ ಎಂಬುದನ್ನು ನೋಡಿ, ಆ ಮೂಲಕ ಅದನ್ನು ಕೋಮುವಾದಿ ಎಂದು ಹೇಳಲು ಕಾಂಗ್ರೆಸ್ ಪಕ್ಷ ಬಯಸುತ್ತಿದೆ.
ಈ ಹಿನ್ನೆಲೆಯಲ್ಲಿ ಅದು ತನ್ನ ಎರಡನೇ ಅಭ್ಯರ್ಥಿಯ ಗೆಲುವನ್ನು ನಿರೀಕ್ಷಿಸುವ ಸ್ಥಿತಿಯಲ್ಲಿಲ್ಲ. ಏಕೆಂದರೆ, ಇರುವ ಮತಗಳ ಪೈಕಿ 46 ಅಥವಾ 47 ಮತಗಳು ತನ್ನ ಎರಡನೇ ಅಭ್ಯರ್ಥಿ ಮನ್ಸೂರ ಅಲಿ ಖಾನ್ ಅವರಿಗೆ ಉಳಿಯುವುದು 13 ಇಲ್ಲವೇ, 14 ಮತಗಳು ಎಂಬುದು ಅದಕ್ಕೆ ಗೊತ್ತಿರುವ ವಿಷಯ. ಹೀಗೆ ಕಾಂಗ್ರೆಸ್ ಪಕ್ಷ ಚುನಾವಣಾ ಕಣದಲ್ಲಿ ಜೆಡಿಎಸ್‌ಗೆ ಮುಖಭಂಗ ಮಾಡುವ ಉದ್ದೇಶವಿಟ್ಟುಕೊಂಡಿದ್ದರೆ, ಬಿಜೆಪಿ ತನ್ನ ಮೂರನೇಯ ಅಭ್ಯರ್ಥಿಯ ಮತ್ತು ಜೆಡಿಎಸ್ ತನ್ನ ಏಕೈಕ ಅಭ್ಯರ್ಥಿಯ ಗೆಲುವಿಗೆ ಕಾತರಿಸುತ್ತಿದೆ.
ಜೆಡಿಎಸ್‌ಗೆ ಮಾಡು ಇಲ್ಲವೇ ಮಡಿ ಹೋರಾಟ:ಈ ಪೈಕಿ ಜೆಡಿಎಸ್‌ಗೆ ಮಾಡು ಇಲ್ಲವೇ ಮಡಿ ಎಂಬ ಪಂಥಾಹ್ವಾನವಿದ್ದು, ಅದು ತನಗಿರುವ 32 ಶಾಸಕ ಬಲದ ಜೊತೆ ಇನ್ನೂ ಹೆಚ್ಚುವರಿಯಾಗಿ 13 ಮತಗಳನ್ನು ಪಡೆಯಬೇಕಾದ ಅನಿವಾರ್ಯತೆ ಇದೆ. ಈಗಿನ ಸ್ಥಿತಿಯಲ್ಲಿ ಅದು ಬಿಜೆಪಿ ಬುಟ್ಟಿಗೆ ಕೈ ಹಾಕಿ ಮತಗಳನ್ನು ಪಡೆಯುವುದು ಕಷ್ಟವಾದರೂ ಕಾಂಗ್ರೆಸ್ ಪಕ್ಷದ ಆಂತರಿಕ ಗೊಂದಲವನ್ನು ಎನ್ ಕ್ಯಾಚ್ ಮಾಡಿಕೊಂಡು ತನ್ನ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಗೆಲುವು ಸಾಧಿಸುವಂತೆ ನೋಡಿಕೊಳ್ಳುತ್ತದೆಯೇ ಎಂದು ಕಾದು ನೋಡಬೇಕಿದೆ.
ಜೆಡಿಎಸ್ ವತಿಯಿಂದ ಸ್ಪರ್ಧಿಸಿರುವ ಕುಪೇಂದ್ರ ರೆಡ್ಡಿ ಅವರು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಆಪ್ತರಾಗಿದ್ದು,ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬುಟ್ಟಿಯಿಂದ ಕೆಲ ಮತಗಳು ಕುಪೇಂದ್ರರೆಡ್ಡಿ ಕಡೆ ವಾಲುತ್ತವೆಯೇ?ಎಂಬುದು ಸದ್ಯದ ಕುತೂಹಲ. ಹಾಗೇನಾದರೂ ಆದರೆ ಜೆಡಿಎಸ್ ಪಕ್ಷಕ್ಕೆ ಮುಖಭಂಗ ಮಾಡುವ ಕಾಂಗ್ರೆಸ್ ಉದ್ದೇಶ ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ. ಒಂದು ವೇಳೆ ಹಾಗೇನಾದರು ಆದರೆ ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವ ಬಿಜೆಪಿಗೂ ನಿರಾಸೆಯಾಗಲಿದ್ದು, ಏಕಕಾಲಕ್ಕೆ ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿಗೆ ಡಿಕ್ಕಿ ಹೊಡೆದಂತಾಗುತ್ತದೆ ಎಂಬುದು ಪ್ರಸ್ತುತ ಲೆಕ್ಕಾಚಾರ.
ತನ್ನ ಅಭ್ಯರ್ಥಿ ಗೆಲ್ಲಿಸಿಕೊಳ್ಳುವ ವಿಶ್ವಾಸ ಬಿಜೆಪಿಯದ್ದು:ಕಾಂಗ್ರೆಸ್ ಪಕ್ಷದಿಂದ ಯಾವ ಮತಗಳೂ ಜೆಡಿಎಸ್‌ಗೆ ಹೋಗಲಾರವು ಎಂದು ನಂಬಿರುವ ಬಿಜೆಪಿ, ಈಗ ತನಗಿರುವ ಹೆಚ್ಚುವರಿ ಮತಗಳ ಜೊತೆ ಮೊದಲ ಪ್ರಾಶಸ್ತ್ಯದ 90 ಮತಗಳ ಬೆಂಬಲದಿಂದ ತನ್ನ ಮೂರನೇ ಕ್ಯಾಂಡಿಡೇಟ್ ಲೆಹರ್ ಸಿಂಗ್ ಅವರನ್ನು ರಾಜ್ಯಸಭೆಗೆ ಕಳಿಸಬಹುದು ಎಂದು ಕನಸು ಕಾಣುತ್ತಿದೆ. ಈ ಅಭ್ಯರ್ಥಿಗಳ ಭವಿಷ್ಯ ಮುಂದೇನಾಗಬಹುದು ಎಂದು ಕಾದು ನೋಡಬೇಕಾಗಿದೆ.
ನಿರಾಯಾಸವಾಗಿ ಗೆಲ್ಲುತ್ತೇವೆ ಎಂದು ಬಿಜೆಪಿ, ಕಾಂಗ್ರೆಸ್ ಬೀಗುತ್ತಿಲ್ಲ. 13 ಮತಗಳು ಕಡಿಮೆ ಬೀಳುತ್ತವಲ್ಲ ಎಂದು ಜೆಡಿಎಸ್ ಕೊರಗುತ್ತಿಲ್ಲ. ಬದಲಿಗೆ ಪರಸ್ಪರ ಮತ ಸೆಳೆಯಲು ತೆರೆಮರೆ ಆಟ ಶುರು ಮಾಡಿವೆ. ಬಿಜೆಪಿ ತನ್ನ ಬಳಿಯಿರುವ ಹೆಚ್ಚುವರಿ 32 ಮತಗಳು ಹಾಗೂ ಎರಡನೇ ಪ್ರಾಶಸ್ತ್ರದ ಮತಗಳಿಂದ ಇನ್ನೊಂದು ಸ್ಥಾನ ಗೆಲ್ಲುವ ಸಂಭಾವ್ಯತೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಚುನಾವಣೆ ಮುಗಿಯುವ ತನಕ ಪಕ್ಷದ ಮತಗಳು ಸುರಕ್ಷಿತವಾಗಿರುವಂತೆ ನೋಡಿಕೊಳ್ಳುವ ಸವಾಲಿದೆ. ಎಲ್ಲರೂ ಒಟ್ಟಾಗಿದ್ದೇವೆ ಎಂದು ಬಿಜೆಪಿ ನಾಯಕರು ಮೇಲಿನ ಮಾತಿಗೆ ಹೇಳಿದರೂ ಆಂತರಿಕವಾಗಿ ಹಿಡಿದಿಟ್ಟುಕೊಳ್ಳುವ ಕಸರತ್ತು ನಡೆಸಿದ್ದಾರೆ. ಶಾಸಕರನ್ನು ಹಿಡಿದಿಟ್ಟುಕೊಳ್ಳುವ ವಿಷಯದಲ್ಲಿ ಕಾಂಗ್ರೆಸ್‌ನದ್ದೂ ಇದೇ ಪರಿಸ್ಥಿತಿ. ಈ ಸರ್ಕಸ್ ಜೊತೆಗೆ ಎರಡನೇ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಬೇಕಾದ ಸವಾಲು ಎದುರಿಸುತ್ತಿದೆ. ಜೆಡಿಎಸ್‌ಗೆ ತಿರುಗೇಟು ನೀಡುವ ಭರದಲ್ಲಿ ಬಿಜೆಪಿಗೆ ಇನ್ನೊಂದು ಸ್ಥಾನದ ಭಕ್ಷೀಸು ಕೊಟ್ಟ ಅಳುಕು ಕಾಂಗ್ರೆಸ್ ನಾಯಕರಲ್ಲಿ ಕಾಡಲಾರಂಭಿಸಿದೆ. ಈ ಮಧ್ಯೆ ಕುಪೇಂದ್ರರೆಡ್ಡಿ ಹಾಗೂ ಲೆಹರ್‌ಸಿಂಗ್ ವೈಯಕ್ತಿಕ ಸಾಮರ್ಥ್ಯ, ನಂಟಿನ ಆಧಾರದಲ್ಲಿ ದಾಳ ಉರುಳಿಸಿದ್ದು, ಯಾರು ಯಾವ ಮತಬುಟ್ಟಿಗೆ ಕೈಹಾಕಿದ್ದಾರೋ ನಿಗೂಢವಾಗಿದೆ.
ಜೆಡಿಎಸ್‌ಗೆ ಚಿಂತೆ ಏನು? : ಕೊರತೆಯಿರುವ 13 ಮತಗಳನ್ನು ಭರ್ತಿ ಮಾಡಿಕೊಳ್ಳಬೇಕು. ವಿವಿಧ ಕಾರಣಗಳಿಗೆ ಮುನಿಸಿಕೊಂಡಿರುವ ಐದಕ್ಕೂ ಹೆಚ್ಚು ಸದಸ್ಯರನ್ನು ಸಮಾಧಾನಪಡಿಸಬೇಕಿದೆ. ಇದು ಜೆಡಿಎಸ್ ನಾಯಕರಿಗೆ ದೊಡ್ಡ ಸವಾಲಾಗಿದೆ. ಮೂರು ಪಕ್ಷಗಳ ಮುಂದಿನ ನಡೆ ಕುತೂಹಲ ಕೆರಳಿಸಿದೆ.
ಇದನ್ನೂ ಓದಿ:ಪರಿಷತ್ ಚುನಾವಣೆ: ಬಿಜೆಪಿ 4, ಕಾಂಗ್ರೆಸ್ 2, ಜೆಡಿಎಸ್ 1 ಸ್ಥಾನ ಗೆಲ್ಲಲು ಅವಕಾಶ