ಬೆಂಗಳೂರು:ಇಂದು ನಡೆಯಲಿರುವ ರಾಜ್ಯಸಭೆ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ 4 ಸ್ಥಾನ ಸೇರಿ 15 ರಾಜ್ಯಗಳಲ್ಲಿ ಒಟ್ಟು 57 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಇಂದೇ ಫಲಿತಾಂಶ ಪ್ರಕಟವಾಗಲಿದೆ. ಕರ್ನಾಟಕದಲ್ಲಿ ನಾಲ್ಕು ಸ್ಥಾನಗಳಿಗೆ ಆರು ಅಭ್ಯರ್ಥಿಗಳು ಅಖಾಡದಲ್ಲಿದ್ದು, ಮೂವರು ಅಭ್ಯರ್ಥಿಗಳು ಸುಲಭವಾಗಿ ಗೆಲುವು ಸಾಧಿಸಲಿದ್ದಾರೆ. ನಾಲ್ಕನೇ ಸೀಟು ಜಿದ್ದಾಜಿದ್ದಿನಿಂದ ಕೂಡಿದೆ. ಆದರೆ, ಮೂರು ಪಕ್ಷಗಳಿಗೆ ಸಿಂಧು - ಅಸಿಂಧು ಮತಗಳದ್ದೇ ಭೀತಿ ಶುರುವಾಗಿದೆ.
ಚುನಾವಣೆಯಲ್ಲಿ ಮತದಾನವನ್ನು ಕ್ರಮ ಪ್ರಕಾರವಾಗಿ ಮಾಡಬೇಕು. ಮತ ಹಾಕುವ ಸಂದರ್ಭ ಎಡವಟ್ಟು ಮಾಡಿದರೆ ಚುನಾವಣಾ ಫಲಿತಾಂಶ ಉಲ್ಟಾಪಲ್ಟಾ ಆಗುವ ಸಾಧ್ಯತೆ ಹೆಚ್ಚು. ಹಾಗಾಗಿ ಶಾಸಕರು ತಮ್ಮ ಮತವನ್ನು ಎಚ್ಚರಿಕೆಯಿಂದ ಕ್ರಮ ಪ್ರಕಾರವಾಗಿ ಹಾಕಬೇಕು. ಇಲ್ಲವಾದರೆ ಮತವನ್ನು ಅಸಿಂಧು ಎಂದು ಪರಿಗಣಿಸಲಾಗುತ್ತದೆ. ಅಸಿಂಧು ಮತ ಬಿದ್ದರೆ ಅಭ್ಯರ್ಥಿಯ ಗೆಲುವಿನ ಲೆಕ್ಕಾಚಾರ ತಲೆಕೆಳಗಾಗುತ್ತದೆ.
ಇಂದು ಮತದಾನದ ಗಂಟೆಯ ಬಳಿಕ ಮತ ಎಣಿಕೆ ಶುರುವಾಗಲಿದ್ದು, ಫಲಿತಾಂಶ ಕೂಡ ಹೊರಬರಲಿದೆ. ಇನ್ನು ಈ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳು ಕೂಡ ಜುಲೈ 18 ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಯಲ್ಲಿ ಮತ ಚಲಾಯಿಸುವ ಸಾಧ್ಯತೆ ಇದೆ.
ಕಣದಲ್ಲಿ ಯಾರು?:ಬಿಜೆಪಿಯಿಂದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ನಟ ಜಗ್ಗೇಶ್, ಕಾಂಗ್ರೆಸ್‌ನಿಂದ ಜೈರಾಂ ರಮೇಶ್ ಗೆಲ್ಲುವುದು ಖಚಿತ. ಇನ್ನು ನಾಲ್ಕನೇ ಸ್ಥಾನಕ್ಕೆ ಬಿಜೆಪಿಯಿಂದ ಲೇಹರ್ ಸಿಂಗ್ ಸಿರೋಯಾ, ಕಾಂಗ್ರೆಸ್‌ನಿಂದ ಮನ್ಸೂರ್ ಖಾನ್ ಮತ್ತು ಜೆಡಿಎಸ್‌ನಿಂದ ಕುಪೇಂದ್ರ ರೆಡ್ಡಿ ಕಣದಲ್ಲಿದ್ದಾರೆ. ಈ ಮೂವರಲ್ಲಿ ಕೊನೆ ಗಳಿಗೆಯಲ್ಲಿ ಯಾರಿಗೆ ಜಯ ಸಿಗಲಿದೆ ಎನ್ನುವುದು ಕುತೂಹಲ ಮೂಡಿಸಿದೆ.