ಕರ್ನಾಟಕ

karnataka

ETV Bharat / city

ವಾಯುಭಾರ ಕುಸಿತ ಚಂಡಮಾರುತವಾಗಿ ಬದಲಾಗುವ ಸಾಧ್ಯತೆ: ರಾಜ್ಯದ ಹಲವೆಡೆ ಯೆಲ್ಲೋ ಅಲರ್ಟ್

ರಾಜ್ಯದ ಹಲವೆಡೆ ಸುರಿಯುತ್ತಿರುವ ಮಳೆ ಮುಂದಿನ ನಾಲ್ಕೈದು ದಿನ ಇನ್ನಷ್ಟು ಚುರುಕಾಗಲಿದೆ. ಈ ಹಿನ್ನೆಲೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

Karnataka Rain update
ಸಾಂದರ್ಭಿಕ ಚಿತ್ರ

By

Published : May 7, 2022, 10:12 AM IST

ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ನಾಳೆ ಮಧ್ಯಾಹ್ನದ ವೇಳೆಗೆ ಚಂಡಮಾರುತವಾಗಿ ಪರಿವರ್ತನೆಯಾಗಲಿದೆ. ಇದರ ಪರಿಣಾಮ ರಾಜ್ಯದ ಹಲವೆಡೆ ಸುರಿಯುತ್ತಿರುವ ಮಳೆ ಮುಂದಿನ ನಾಲ್ಕೈದು ದಿನ ಇನ್ನಷ್ಟು ಚುರುಕಾಗಲಿದೆ ಎಂದು ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.

ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಾಮರಾಜನಗರ, ಹಾಸನ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಮಂಡ್ಯ, ಮೈಸೂರು, ಚಿತ್ರದುರ್ಗ, ಬಳ್ಳಾರಿ ಹಾಗೂ ದಾವಣಗೆರೆಯಲ್ಲಿ ಮುಂದಿನ 4 ದಿನ ಗುಡುಗು ಮಿಂಚು ಸಹಿತ ಭಾರಿ ಮಳೆ ಬೀಳಲಿದೆ. ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿಯೂ ಧಾರಾಕಾರ ಮಳೆ ಬೀಳಲಿದ್ದು, ಈ ಹಿನ್ನೆಲೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ನಗರದಲ್ಲಿಂದು ಯೆಲ್ಲೋ ಅಲರ್ಟ್:ಬೆಂಗಳೂರಿನಲ್ಲಿ ಶನಿವಾರ ಗುಡುಗು ಸಹಿತ ಭಾರಿ ಮಳೆ ಬೀಳಲಿರುವ ಹಿನ್ನೆಲೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ನಗರದ ಹಲವು ಬಡಾವಣೆಗಳಲ್ಲಿ ನಿನ್ನೆ ಸುರಿದ ಧಾರಾಕಾರ ಮಳೆಯಿಂದ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.

ಸಂಚಾರ ಅಸ್ತವ್ಯಸ್ತ:ಸಂಜೆ ಆರಂಭವಾದ ಮಳೆ ರಾತ್ರಿಯವರೆಗೆ ಧಾರಾಕಾರವಾಗಿ ಸುರಿಯಿತು. ರಸ್ತೆಗಳ ಮೇಲೆ 2 ರಿಂದ 3 ಅಡಿ ನೀರು ನಿಂತು ಹಲವು ವಾಹನಗಳು ಕೆಟ್ಟು ನಿಂತಿದ್ದವು. ಹೊಸಕೆರೆಹಳ್ಳಿ ರಸ್ತೆಯ ಪಿಇಎಸ್ ಕಾಲೇಜಿನ ಸಮೀಪದಲ್ಲಿ ಬಸ್ ಮೇಲೆ ಮರ ಬಿದ್ದಿದ್ದು, ಅದೃಷ್ಟವಶಾತ್ ಅನಾಹುತ ಸಂಭವಿಸಿಲ್ಲ. ಪ್ರಮುಖ ರಸ್ತೆಗಳಲ್ಲಿರುವ ಮರಗಳು ಬಿದ್ದು ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.

ವಿದ್ಯುತ್ ಸರಬರಾಜು ಸ್ಥಗಿತ: ವಿದ್ಯುತ್ ಸರಬರಾಜು ಸ್ಥಗಿತವಾಗಿದ್ದರಿಂದ ನಗರದ ಹಲವು ಬಡಾವಣೆಗಳಲ್ಲಿನ ನಿವಾಸಿಗಳು ಪರದಾಡಿದರು. 50ಕ್ಕೂ ಹೆಚ್ಚು ಮ್ಯಾನ್‌ಹೋಲ್‌ಗಳು ಉಕ್ಕಿಹರಿದವು. ಇಂದಿರಾನಗರ, ಉತ್ತರಹಳ್ಳಿ ಸೇರಿ ಹಲವೆಡೆ ಮರದ ಕೊಂಬೆಗಳು ಮುರಿದು ಬಿದಿದ್ದು ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಬಿಬಿಎಂಪಿ ತಿಳಿಸಿದೆ.

ಎಲ್ಲೆಲ್ಲಿ ಎಷ್ಟು ಮಳೆ:ಶುಕ್ರವಾರ ಹೆಚ್ಎಎಲ್ ವಿಮಾನ ನಿಲ್ದಾಣದ ಸುತ್ತಮುತ್ತ ಅತಿ ಹೆಚ್ಚು 70 ಮಿ.ಮೀ ಮಳೆಯಾಗಿದೆ. ಕೆಂಗೇರಿಯಲ್ಲಿ 49 ಮಿ.ಮೀ, ಆರ್.ಆರ್. ನಗರದಲ್ಲಿ 33 ಮಿ.ಮೀ, ಬಸವನಗುಡಿಯಲ್ಲಿ 32 ಮಿ.ಮೀ, ಬಾಗಲೂರಿನಲ್ಲಿ 30 ಮಿ.ಮೀ ಹಾಗೂ ನಾಗರ ಬಾವಿಯಲ್ಲಿ 28 ಮಿ.ಮೀ. ಮಳೆ ಸುರಿದಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ:ಮುಂದಿನ 4 ದಿನ ರಾಜ್ಯದಲ್ಲಿ ಭಾರಿ ಮಳೆ ಸಾಧ್ಯತೆ: ಹವಾಮಾನ ಇಲಾಖೆ

ABOUT THE AUTHOR

...view details