ಯಲಹಂಕ(ಬೆಂಗಳೂರು): ಭಾನುವಾರ ರಾತ್ರಿ ಸುರಿದ ಭಾರಿ ಮಳೆಯಿಂದ (138 ಮಿ.ಮೀ ಮಳೆ) ಯಲಹಂಕ ಕೆರೆಯ ಕಟ್ಟೆ ಒಡೆದು ತಗ್ಗು ಪ್ರದೇಶ ಮತ್ತು ಕೇಂದ್ರೀಯ ವಿಹಾರ ಅಪಾರ್ಟ್ಮೆಂಟ್ಗೆ ಮಳೆ ನೀರು ನುಗ್ಗಿ ಅಲ್ಲಿನ ನಿವಾಸಿಗಳು ಅಕ್ಷರಶಃ ನಲುಗಿದ್ದಾರೆ. ಅಪಾರ್ಟ್ಮೆಂಟ್ನಲ್ಲಿ 3000 ಸಾವಿರಕ್ಕೂ ಹೆಚ್ಚು ನಿವಾಸಿಗಳು ಮೂರು ದಿನಗಳೇ ಕಳೆದರೂ ಜಲಾವೃತವಾಗಿರುವ ಕಟ್ಟಡದ ಮಧ್ಯೆ ಕತ್ತಲು ಕವಿದು ಸಂಕಷ್ಟ ಅನುಭವಿಸುತ್ತಿದ್ದಾರೆ.
ಯಲಹಂಕ ಸುತ್ತಮುತ್ತ 11 ಕೆರೆಗಳಿದ್ದು, ಈ ಕೆರೆಗಳ ನೀರು ಸಹ ಯಲಹಂಕದ ಕೆರೆಗೆ ಹರಿದು ಬಂದಿದೆ. ಯಲಹಂಕ ಕೆರೆ ಕಟ್ಟೆ ಒಡೆದು ಪ್ರವಾಹದಂತೆ ಹರಿದು ಬಂದ ನೀರು ಕೆರೆಯ ಪಕ್ಕದಲ್ಲಿನ ತಗ್ಗು ಪ್ರದೇಶಗಳಿಗೆ ಮತ್ತು ಕೇಂದ್ರೀಯ ವಿಹಾರ ಅಪಾರ್ಟ್ಮೆಂಟ್ಗೆ ನುಗ್ಗಿದೆ. ಕೆರೆಯ ಕೋಡಿಯಿಂದ ನೀರು ಹರಿದು ಹೋಗಲಿಕ್ಕಿರುವ ರಾಜಕಾಲುವೆ ಕೇವಲ 8 ಅಡಿ ಅಗಲವಿದೆ. ಹಾಗಾಗಿ ನೀರು ಸರಾಗವಾಗಿ ಹೋಗಲು ಸಾಧ್ಯವಾಗದೇ ತಗ್ಗು ಪ್ರದೇಶಗಳಲ್ಲಿ 4 ರಿಂದ 5 ಅಡಿ ನೀರು ನಿಂತಿದೆ.
Kendriya Vihar apartment; ಕೇಂದ್ರೀಯ ವಿಹಾರ ಅಪಾರ್ಟ್ಮೆಂಟ್ನಲ್ಲಿ 600ಕ್ಕೂ ಹೆಚ್ಚು ಫ್ಲ್ಯಾಟ್ಗಳಿವೆ. ಬೆಂಗಳೂರು ಸುರಕ್ಷಿತ ನಗರ ಮತ್ತು ಉದ್ಯೋಗಾವಕಾಶಗಳ ತವರಾಗಿರುವ ಕಾರಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಉತ್ತರ ಭಾರತೀಯರು ಇಲ್ಲಿ ವಾಸವಾಗಿದ್ದಾರೆ. ಹೆಚ್ಚಿನ ಫ್ಲ್ಯಾಟ್ಗಳಲ್ಲಿ ಹಿರಿಯ ನಾಗರಿಕರು ವಾಸವಾಗಿದ್ದು, ಅವರ ಮಕ್ಕಳು ವಿದೇಶಗಳಲ್ಲಿ ನೆಲೆಸಿದ್ದಾರೆ. ಬಹುತೇಕ ಹಿರಿಯರು ಸಕ್ಕರೆ ಕಾಯಿಲೆ, ರಕ್ತದೊತ್ತಡದಿಂದ ಬಳಲುತ್ತಿರುವುದು ವಿದೇಶದಲ್ಲಿರುವ ಮಕ್ಕಳ ಚಿಂತೆಗೆ ಕಾರಣವಾಗಿದೆ.