ಬೆಂಗಳೂರು: ನಗರದ ಹಲವು ಭಾಗಗಳಲ್ಲಿ ಶನಿವಾರ, ಭಾನುವಾರ ರಾತ್ರಿ ಗುಡುಗು ಮಿಂಚು ಸಹಿತ ಭಾರಿ ಮಳೆ ಸುರಿದಿದೆ. ಸೋಮವಾರ ರಾತ್ರಿ ಕೂಡ ಮಳೆ ಮುಂದುವರೆದಿದ್ದು, ವಾಹನ ಸವಾರರು ಪರದಾಡುವಂತಾಯಿತು. ನಗರದ ಎಂ.ಎಸ್ ಪಾಳ್ಯದ ಬಳಿ ಬೈಕ್ ಸವಾರನೊಬ್ಬ ಕಾಮಗಾರಿ ನಡೆಯುತ್ತಿದ್ದ ಜಲಾವೃತ ರಸ್ತೆ ಗುಂಡಿಗೆ ಬಿದ್ದು ತಲೆಗೆ ಗಂಭೀರವಾದ ಗಾಯವಾಗಿರುವ ಘಟನೆ ವರದಿಯಾಗಿದೆ.
ರಾತ್ರಿ 8 ರಿಂದ ಪ್ರಾರಂಭವಾದ ಮಳೆ ಕೊಂಚ ಬಿಡುವು ನೀಡಿ ಮತ್ತೆ ತಡ ರಾತ್ರಿಯವರೆಗೂ ಸುರಿದಿದೆ. ಪರಿಣಾಮ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ನಗರದ ಫ್ರೆಜರ್ ಟೌನ್, ಆರ್ಆರ್ ನಗರ, ಅಂಜನಾಪುರ, ಬೇಗೂರು, ಯಲಹಂಕ, ವಿದ್ಯಾರಣ್ಯಪುರ, ಮಹದೇವಪುರ, ಹೊರಮಾವು, ಪ್ಯಾಲೇಸ್ ಗುಟ್ಟಹಳ್ಳಿ, ಮಲ್ಲೇಶ್ವರ, ವಿಧಾನಸೌಧ, ಪುಲಕೇಶಿನಗರ, ನಾಗರಬಾವಿ, ಕೋರಮಂಗಲ, ನಾಯಂಡಹಳ್ಳಿ, ಲಕ್ಕಸಂದ್ರ, ವಿದ್ಯಾಪೀಠ, ಕೆಂಗೇರಿ ಸೇರಿ ಸುತ್ತಮುತ್ತಲಿನ ಹಲವು ಪ್ರದೇಶಗಳಲ್ಲಿ ಭಾರಿ ಮಳೆಯಾಗಿದೆ. ಇನ್ನು ಸದಾಶಿವನಗರ, ಯಶವಂತಪುರ, ಹೂಡಿ, ವಿಶ್ವನಾಥ ನಾಗೇನಹಳ್ಳಿ, ರಾಮಮೂರ್ತಿನಗರ ಹಾಗೂ ಕಾಡುಗೋಡಿ ಸೇರಿ ಬಹುತೇಕ ಕಡೆ ಸಾಧಾರಣ ಮಳೆಯಾಗಿದೆ.