ಬೆಂಗಳೂರು: ಡಿ.ಕೆ. ಶಿವಕುಮಾರ್ ಸೋಲಿಗೆ ಮೊದಲೇ ಶಸ್ತ್ರತ್ಯಾಗ ಮಾಡಿ ಹೋಗಿದ್ದಾರೆ ಎಂದು ಕಂದಾಯ ಸಚಿವ ಆರ್. ಅಶೋಕ್ ಟಾಂಗ್ ನೀಡಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ನಾಳೆಯ ಉಪಚುನಾವಣಾ ಫಲಿತಾಂಶ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ನಾಳೆ ಎರಡೂ ಕಡೆ ಎಲ್ಲಾ ಪಕ್ಷಗಳ ಭವಿಷ್ಯ ನಿರ್ಧಾರವಾಗಲಿದೆ. ನನಗೆ ಆರ್.ಆರ್ ನಗರ ಉಸ್ತುವಾರಿ ಕೊಟ್ಟಿದ್ದರು. ಸುಮಾರು 25 ವರ್ಷ ಅಲ್ಲಿ ಕಾರ್ಯಕರ್ತ, ಶಾಸಕ, ಸಚಿವನಾಗಿ ಕೆಲಸ ಮಾಡಿದ್ದೇನೆ. ಉಪಚುನಾವಣೆ ವೇಳೆ ಅಲ್ಲೇ ಇದ್ದು ದುಡಿದಿದ್ದೇನೆ. ಅಲ್ಲಿ ಡಿಕೆಶಿ ಆಟ ನಡೆಯಲ್ಲ. ನಾವು 25-30 ಸಾವಿರ ಲೀಡ್ನಲ್ಲಿ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಡಿಕೆಶಿ ಅವರು ನನ್ನ ಹೇಳಿಕೆಗಳಿಗೆ ಉತ್ತರವನ್ನೇ ಕೊಟ್ಟಿಲ್ಲ. ಅವರು ಸೋಲಿಗೆ ಮೊದಲೇ ಶಸ್ತ್ರತ್ಯಾಗ ಮಾಡಿ ಹೋಗಿದ್ದಾರೆ. ಮಾತೆತ್ತಿದ್ದರೆ ಅಶೋಕಣ್ಣ ದೊಡ್ಡವರು, ರವಿ ಅವರು ದೊಡ್ಡವರು. ಮುನಿರತ್ನ ನನ್ನ ಸರಿ ಸಮಾನ ಅಲ್ಲ ಎಂಬ ಬಂಡೆ ಮಾತುಗಳನ್ನು ಆಡಿದ್ದಾರೆ. ಅವರು ಏನೂ ಕೆಲಸ ಮಾಡಿಲ್ಲ. ಡಿಕೆಶಿ ನಾನೇ ಇಲ್ಲಿ ಅಭ್ಯರ್ಥಿ ಅಂತಾ ಹೇಳಿಕೊಂಡು ಕ್ಷೇತ್ರದಲ್ಲೆಲ್ಲಾ ಓಡಾಡಿದ್ದರು. ಅದಕ್ಕೆ ಅಲ್ಲಿ ನಾನೂ ಕೂಡ ನಾನೇ ಅಭ್ಯರ್ಥಿ ಅಂತಾನೇ ಪ್ರಚಾರ ಮಾಡಿದ್ದೇನೆ. ಈಗಾಗಲೇ ಸಿದ್ದರಾಮಯ್ಯ ಕೂಡ ಸೋಲನ್ನು ಒಪ್ಪಿಕೊಂಡಿದ್ದಾರೆ ಎಂದು ಸ್ಪಷ್ಟಪಡಿಸಿದರು.