ಬೆಂಗಳೂರು: ನೆರೆ ಪರಿಹಾರಕ್ಕೆ ಯಾವುದೇ ಹಣದ ಕೊರತೆ ಇಲ್ಲ. ಕೇಂದ್ರದಿಂದಲೇ ಪರಿಹಾರ ಬರಲಿ ಅಂತ ಕಾಯ್ತಾ ಕೂರಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಸ್ಪಷ್ಟಪಡಿಸಿದರು.
ಪ್ರಧಾನಿ ಜೊತೆ ವಿಡಿಯೋ ಕಾನ್ಫರೆನ್ಸ್ ಬಳಿಕ ಮಾತನಾಡಿದ ಅವರು, ರಾಜ್ಯ ಸರ್ಕಾರದ ಬಳಿ ಹಣ ಇದೆ. ಹಣದ ಕೊರತೆ ಇಲ್ಲ. ಕೇಂದ್ರ ಸರ್ಕಾರದಿಂದ ಹಣ ಬರುವ ತನಕ ಕಾಯುವುದಿಲ್ಲ ಎಂದು ತಿಳಿಸಿದರು. ಪ್ರಧಾನಿಯವರು ರಾಜ್ಯದ ಪ್ರವಾಹ ಪರಿಹಾರ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಡಿಸಿಗಳ ಅಕೌಂಟಲ್ಲಿ 1120 ಕೋಟಿ ರೂ ಹಣ ಇದೆ. ಡಿಸಿಗಳು ಬೇಡಿಕೆ ಇಟ್ಟಷ್ಟು ಹಣವನ್ನು ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದರು.
ಕಳೆದ ವರ್ಷದ ನೆರೆ ಪರಿಹಾರ ಬಾಕಿ ಮೊತ್ತ ಕೇಳುತ್ತಿದ್ದೇವೆ. ಆದರೆ ಕೇಂದ್ರ ಸರ್ಕಾರ ಯಾವುದೇ ಬಾಕಿ ಹಣ ಇಲ್ಲ ಅಂತಿದೆ. ಈಗಾಗಲೇ ಎನ್ಡಿಆರ್ಎಫ್ ನಿಯಮಗಳಡಿ ಪರಿಹಾರ ಸಿಕ್ಕಿದೆ ಎಂದು ಸ್ಪಷ್ಟಪಡಿಸಿದರು. ಕಾಳಜಿ ಕೇಂದ್ರಗಳಲ್ಲಿರುವವರಿಗೆ ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಮಾಡುತ್ತೇವೆ. ಕಾಳಜಿ ಕೇಂದ್ರದಲ್ಲಿ ಇರುವವರಿಗೆ ಉತ್ತಮ ಊಟ ಕೊಡಲು ನಿರ್ದೇಶನ ನೀಡಿದ್ದೇನೆ. ಮೊಟ್ಟೆ, ಹಪ್ಪಳ, ಉಪ್ಪಿನಕಾಯಿ ಜೊತೆಗೆ ಊಟ ಕೊಡಲು ಆದೇಶ ಹೊರಡಿಸಲಿದ್ದೇನೆ ಎಂದರು.
334 ಕೋಟಿ ರೂ. ಮನೆ ಹಾನಿ ಪರಿಹಾರ ಬಿಡುಗಡೆ
2019ರಲ್ಲಿ ಪ್ರವಾಹದಲ್ಲಿ ಮನೆ ಕಳಕೊಂಡ ಸಂತ್ರಸ್ತರಿಗೆ 334 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು. ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಪರಿಹಾರ ಹಣ ಬಿಡುಗಡೆ ಮಾಡಲಾಗಿದೆ. ಮೂರನೇ ಕಂತು, ನಾಲ್ಕನೇ ಕಂತು ಪರಿಹಾರ ಬಾಕಿ ಇರೋರಿಗೆ ಹಣ ಬಿಡುಗಡೆ ಮಾಡಲಾಗಿದೆ. 21 ಜಿಲ್ಲೆಗಳಿಗೂ ಪರಿಹಾರ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ಆದರೆ 80% ಸಂತ್ರಸ್ತರು 1 ಲಕ್ಷ ಪರಿಹಾರ ಪಡೆದು ಕೆಲಸ ಆರಂಭ ಮಾಡಿಲ್ಲ. ಈ ಬಗ್ಗೆ ಸಿಎಂ ಪತ್ರ ಬರದಿದ್ದಾರೆ. ನಾನೂ ಮೂರು ನಾಲ್ಕು ಬಾರಿ ಪತ್ರ ಬರೆದಿದ್ದೇನೆ. ಆದರೆ ಮಳೆ ಹಾನಿಗೀಡಾದ ಫಲಾನುಭವಿಗಳು ಹಣ ಪಡೆಯುತ್ತಿಲ್ಲ ಎಂದು ತಿಳಿಸಿದರು.
ಬಾಗಲಕೋಟೆ 29.02 ಕೋಟಿ ರೂ., ಬಳ್ಳಾರಿ 70.31 ಲಕ್ಷ, ಬೆಳಗಾವಿ 178 ಕೋಟಿ, ಚಾಮರಾಜನಗರ 50.40 ಲಕ್ಷ, ಚಿಕ್ಕಮಗಳೂರು 9.44 ಕೋಟಿ, ಚಿತ್ರದುರ್ಗ 3.80 ಲಕ್ಷ, ದ.ಕನ್ನಡ 4.68 ಕೋಟಿ, ದಾವಣಗೆರೆ 18 ಲಕ್ಷ, ಧಾರವಾಡ 13.98 ಕೋಟಿ, ಗದಗ 11.84 ಕೋಟಿ, ಹಾಸನ 9.30 ಕೋಟಿ, ಹಾವೇರಿ 49.07 ಕೋಟಿ, ಕೊಡಗು 4.81 ಕೋಟಿ, ಮಂಡ್ಯ 1.12 ಲಕ್ಷ, ಮೈಸೂರು 14.14 ಕೋಟಿ, ರಾಯಚೂರು 16.78 ಲಕ್ಷ, ಶಿವಮೊಗ್ಗ 2.15 ಕೋಟಿ, ಉಡುಪಿ 80.11 ಲಕ್ಷ, ಉ.ಕನ್ನಡ 5.18 ಕೋಟಿ, ವಿಜಯಪುರ 12.62 ಲಕ್ಷ ಮತ್ತು ಯಾದಗಿರಿಗೆ 2.85 ಲಕ್ಷ ರೂಪಾಯಿ ಮನೆ ಹಾನಿ ಪರಿಹಾರವನ್ನು ಬಿಡುಗಡೆ ಮಾಡಲಾಗಿದೆ ಎಂದು ವಿವರಿಸಿದರು.