ಬೆಂಗಳೂರು:ಸಂಶೋಧನೆ ಮತ್ತು ಅಭಿವೃದ್ಧಿ ಪಾಲಿಸಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಯುವಿಸಿಇ ಆರ್ ಅಂಡ್ ಡಿ ನೀತಿಯನ್ನು ಅನುಷ್ಠಾನಕ್ಕೆ ತರುವ ಮುಂಚೂಣಿ ಸಂಸ್ಥೆಯಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ನೀಡಿದ್ದಾರೆ. ಉನ್ನತ ಶಿಕ್ಷಣ ಇಲಾಖೆ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ವತಿಯಿಂದ ಯುವಿಸಿಇ ಆವರಣದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಹಾಗೂ ನವೀಕರಿಸಿರುವ ಕಟ್ಟಡಗಳು ಹಾಗೂ ಇಂಜಿನಿಯರಿಂಗ್ ಕಾಲೇಜಿನ ನವೀಕರಿಸಿದ ಐಕಾನಿಕ್ ಬ್ಲಾಕ್ ಕಟ್ಟಡಗಳನ್ನು ಉದ್ಘಾಟಿಸಿ, ನೂತನ ಮೆಕ್ಯಾನಿಕಲ್ ವಿಭಾಗದ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಕರ್ನಾಟಕ ದೇಶಕ್ಕೇ ಅತ್ಯಂತ ಕೌಶಲಯುತ ಯುವಕರನ್ನು ಒದಗಿಸಬಲ್ಲದು, ರಾಜ್ಯ ಸರ್ಕಾರ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವ ತೀರ್ಮಾನಗಳನ್ನು ಕೈಗೊಂಡಿದೆ. ವಿನೂತನವಾದ ವಿಚಾರಗಳನ್ನು ರೂಪಿಸಲಾಗಿದೆ. ನೂತನ ಶಿಕ್ಷಣ ನೀತಿ ಜಾರಿಗೆ ತರಲಾಗಿದೆ. ಹೊಂದಿಕೊಳ್ಳುವ ಗುಣವುಳ್ಳ ನೀತಿಯನ್ನು ನಮ್ಮ ನಾಯಕರಾದ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಅಚ್ಚುಕಟ್ಟಾಗಿ ಅನುಷ್ಠಾನ ಮಾಡಲಾಗುತ್ತಿದೆ.
ರಾಜ್ಯದ 7 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳನ್ನು ಐಐಟಿ ಮಟ್ಟಕ್ಕೆ ಮೇಲ್ದರ್ಜೆಗೇರಿಸಲಾಗುತ್ತಿದೆ. ಕಾಲಮಿತಿಯೊಳಗೆ ಇದನ್ನು ಅನುಷ್ಠಾನಕ್ಕೆ ತಂದು ಇಡೀ ಭಾರತಕ್ಕೆ ಕರ್ನಾಟಕ ಕೇವಲ ಪ್ರಗತಿಪರ ರಾಜ್ಯ ಮಾತ್ರವಲ್ಲ, ದೇಶಕ್ಕೇ ಅತ್ಯಂತ ಕೌಶಲಯುತ ಯುವಕರನ್ನು ಒದಗಿಸಬಲ್ಲದು ಎಂದು ನಿರೂಪಿಸಲಾಗುವುದು ಎಂದರು.
ವಿಶ್ವದ ಭವಿಷ್ಯವನ್ನು ಬರೆಯುವ ಅವಕಾಶಗಳಿವೆ :ಶಿಕ್ಷಣ ಬಹಳ ಮುಖ್ಯ ಅದರೊಂದಿಗೆ ಜ್ಞಾನವೂ ಮುಖ್ಯ. ಜ್ಞಾನ ಶಿಕ್ಷಣದೆಡೆಗಿನ ಪರಿಪೂರ್ಣ ವಿಧಾನ. ಇದು ಜ್ಞಾನದ ಯುಗ. ಜ್ಞಾನಕ್ಕೆ ಹೆಚ್ಚಿನ ಬೆಲೆ ಇದೆ. ಜ್ಞಾನವಂತರು ನಿರ್ಣಯಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ರಾಜ್ಯದಲ್ಲಿ ದೇಶದಲ್ಲಿಯೇ ಅತಿ ಹೆಚ್ಚಿನ ಸಂಖ್ಯೆಯ ಸ್ಟಾರ್ಟ್ ಅಪ್ಗಳು ಮತ್ತು ಯೂನಿಕಾರ್ನ್ಗಳಿವೆ.