ದೊಡ್ಡಬಳ್ಳಾಪುರ:ಆಸ್ತಿ ವಿಚಾರಕ್ಕೆ ಗಂಡ ಹೆಂಡತಿ ನಡುವೆ ಜಗಳವಾಗಿದೆ. ನನ್ನಿಂದ ಗಂಡ ದೂರವಾಗಲು ಪಕ್ಕದ್ಮನೆಯವರೇ ಕಾರಣವೆಂದು ಪತ್ನಿ ಅಕ್ರೋಶಗೊಂಡಿದ್ದಾರೆ. ಹೀಗಾಗಿ ಪಕ್ಕದ್ಮನೆ ಮಹಿಳೆಯ ಸೀರೆ ಬಿಚ್ಚಿ ಅದೇ ಸೀರೆಯಿಂದ ಮರಕ್ಕೆ ಕಟ್ಟಿ ಹಾಕಿ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ದೊಡ್ಡಬಳ್ಳಾಪುರ ತಾಲೂಕಿನ ಮಲ್ಲೋಹಳ್ಳಿಯಲ್ಲಿ ಫೆಬ್ರವರಿ 28 ರ ಬೆಳಗ್ಗೆ ಈ ಘಟನೆ ನಡೆದಿದೆ. ಮೇಲ್ಜಾತಿ ಸಮುದಾಯಕ್ಕೆ ಸೇರಿದ ಮಹಿಳೆ ಕೆಳ ಸಮುದಾಯಕ್ಕೆ ಸೇರಿದ ಮಹಿಳೆಯ ಸೀರೆ ಬಿಚ್ಚಿ ಅದೇ ಸೀರೆಯಿಂದ ಹುಣಸೆ ಮರಕ್ಕೆ ಕಟ್ಟಿ ಹಲ್ಲೆ ನಡೆಸಿದ್ದಾರೆಂಬ ಆರೋಪ ಕೇಳಿಬಂದಿದೆ. ಅಷ್ಟೇ ಅಲ್ಲದೆ ಸೀರೆ ಬಿಚ್ಚಿ ಹಲ್ಲೆ ನಡೆಸಿದ ವಿಚಾರಕ್ಕೆ ಸಂಬಂಧಿಸಿದಂತೆ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ವಾರವಾಗಿದೆ. ಆದರೆ ದೂರು ನೀಡಿ ವಾರ ಕಳೆದ್ರೂ ಪ್ರಕರಣ ದಾಖಲು ಮಾಡಿಲ್ಲ ಮತ್ತು ತನಿಖೆ ಕೈಗೊಂಡಿಲ್ಲ ಎಂದು ಹಲ್ಲೆಗೊಳಗಾದ ಕುಟುಂಬಸ್ಥರು ಆರೋಪಿಸಿದ್ದಾರೆ.