ಬೆಂಗಳೂರು: ನಗರದ ಯಲಹಂಕ ಸಮೀಪದ ಪುಟ್ಟೇನಹಳ್ಳಿ ಕೆರೆಯ ಪಕ್ಷಿ ಸಂರಕ್ಷಣಾ ಮೀಸಲು ಪ್ರದೇಶವನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಹಸ್ತಾಂತರ ಮಾಡಲು ಸರ್ಕಾರ 2019ರ ನ.19ರಂದು ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದು ಮಾಡಿದೆ. ಅಲ್ಲದೇ, ಇನ್ನು ಮುಂದೆ ಅರಣ್ಯ ಇಲಾಖೆಯೇ ಪಕ್ಷಿ ಸಂಕುಲದ ಪ್ರದೇಶವನ್ನು ನೋಡಿಕೊಳ್ಳಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
ಯಲಹಂಕ - ಪುಟ್ಟೇನಹಳ್ಳಿ ಕೆರೆ ಹಿತರಕ್ಷಣಾ ಸಮಿತಿ ಮತ್ತು ಬರ್ಡ್ ಕನ್ಸರ್ವೇಷನ್ ಟ್ರಸ್ಟ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಆಲಿಸಿದ ಸಿಜೆ ರಿತುರಾಜ್ ಅವಸ್ಥಿ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಪಕ್ಷಿ ಸಂಕುಲ ನಿಯಂತ್ರಣ ಮತ್ತು ನಿರ್ವಹಣೆ ಮಾಡುವ ಅಧಿಕಾರ ವನ್ಯಜೀವಿ ವಾರ್ಡನ್ಗೆ ಇದೆ. ಅದನ್ನು ಬಿಬಿಎಂಪಿಗೆ ಹಸ್ತಾಂತರ ಮಾಡುವುದು ನ್ಯಾಯೋಚಿತವಲ್ಲ. ಹಾಗಾಗಿ, ಅರಣ್ಯ ಇಲಾಖೆಯೇ ನಿರ್ವಹಣೆ ಮಾಡುವುದು ಸೂಕ್ತ ಎಂದು ಪೀಠ ಹೇಳಿದೆ.