ಬೆಂಗಳೂರು: ಬಿಜೆಪಿ ಸರ್ಕಾರ ಮಹಿಳಾ ವಿರೋಧಿ ನೀತಿ ಅನುಸರಿಸುತ್ತಿದೆ. ಬಿಜೆಪಿ ಸರ್ಕಾರ ನಿರಂತರವಾಗಿ ಅಡುಗೆ ಅನಿಲ ಬೆಲೆ ಏರಿಕೆ ಮಾಡುತ್ತಿದ್ದು, ಕಳೆದ 8 ವರ್ಷಗಳ ಅವಧಿಯಲ್ಲಿ 845 ರೂ. ಏರಿಕೆ ಮಾಡಿದ್ದಾರೆ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ. ಪುಷ್ಪಾ ಅಮರನಾಥ್ ಆರೋಪಿಸಿದ್ದಾರೆ.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಮಾಧ್ಯಮಗೋಷ್ಟಿಯದ್ದೇಶಿಸಿ ಮಾತನಾಡಿದ ಅವರು, ಪ್ರಧಾನಮಂತ್ರಿಗಳ ಹೆಸರಿನಲ್ಲಿ ಕೇಂದ್ರ ಸರ್ಕಾರ ಉಜ್ವಲ ಯೋಜನೆ ಘೋಷಣೆ ಮಾಡಿತ್ತು. ಈ ಯೋಜನೆ ಎಷ್ಟು ಜನರಿಗೆ ತಲುಪಿದೆ ಎಂಬು ಪ್ರಶ್ನೆ ಒಂದು ಕಡೆಯಾದರೆ, ಮಹಿಳೆಯರು ಹೊಗೆರಹಿತ ಅಡುಗೆ ವ್ಯವಸ್ಥೆಯಲ್ಲಿ ಅಡುಗೆ ಮಾಡುವಲ್ಲಿ ಈ ಯೋಜನೆ ನಿರೀಕ್ಷಿತ ಮಟ್ಟದ ಯಶಸ್ಸು ಕಾಣದೇ ಹಳ್ಳ ಹಿಡಿದಿದೆ ಎಂದು ಟೀಕಿಸಿದರು. ಮಹಿಳೆಯರಿಗೆ ಅಚ್ಛೇ ದಿನ ಕೊಡುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ 8 ವರ್ಷಗಳಲ್ಲಿ ಮಹಿಳೆಯರಿಗೆ ನಿರಂತರವಾಗಿ ಅನ್ಯಾಯ ಮಾಡಿಕೊಂಡು ಬಂದಿದೆ. ಬಿಜೆಪಿ ಮಹಿಳಾ ನಾಯಕರು ಬೆಲೆ ಏರಿಕೆ ವಿಚಾರದಲ್ಲಿ ಯಾವಾಗ ಧ್ವನಿ ಎತ್ತುತ್ತಾರೆ? ಎಂದು ಪ್ರಶ್ನಿಸಿದ್ದಾರೆ.
ದಲಿತ ಮಹಿಳೆಯರ ಮೇಲೆ ಅತ್ಯಾಚಾರ, ಅನಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ. ಆ್ಯಸಿಡ್ ದಾಳಿ ಇದಕ್ಕೆ ಉದಾಹರಣೆ. ಗೃಹ ಸಚಿವರ ಕ್ಷೇತ್ರದಲ್ಲಿ ದಲಿತ ಕುಟುಂಬದ ಮೇಲೆ ದೌರ್ಜನ್ಯ ನಡೆದಾಗ ಆ ಬಗ್ಗೆ ಮಾತನಾಡಲಿಲ್ಲ ಹಾಗೂ ಆ ಕುಟುಂಬಕ್ಕೆ ನ್ಯಾಯ ಕೊಡಿಸಲು ಅಧಿಕಾರಿಗಳ ಜೊತೆ ಮಾತನಾಡಲಿಲ್ಲ ಎಂದು ಆರೋಪಿಸಿದ್ರು.
ಉಚಿತ ಸೌದೆ ಯೋಜನೆ: ಬಿಜೆಪಿ ನಾಯಕಿ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸ್ಮೃತಿ ಇರಾನಿ, ಶಶಿಕಲಾ ಜೊಲ್ಲೆ, ತಾರಾ, ಮಾಳವಿಕ ಅವರನ್ನು ನಾನು ಒಂದು ಪ್ರಶ್ನೆ ಕೇಳಲು ಬಯಸುತ್ತೇನೆ. ಯುಪಿಎ ಅವಧಿಯಲ್ಲಿ ಅಡುಗೆ ಅನಿಲದ ಬೆಲೆ 10 ರೂ. ಹೆಚ್ಚಾದರೆ ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದ್ದ ಸ್ಮೃತಿ ಇರಾನಿ, ಶೋಭಾ ಕರಂದ್ಲಾಜೆ ಅವರು ಈಗ ಎಲ್ಲಿದ್ದಾರೆ? ಮಾತನಾಡಲು ಧೈರ್ಯ ಬರುತ್ತಿಲ್ಲವೇ? ಬೆಲೆ ಇಳಿಸಿ ಮಹಿಳೆಯರಿಗೆ ನೆರವಾಗಲು ಮನಸ್ಸಿಲ್ಲವೇ? ನಿರಂತರ ಬೆಲೆ ಏರಿಕೆಯನ್ನು ಧಿಕ್ಕರಿಸಿ, ಸರ್ಕಾರದ ಬಳಿ ನ್ಯಾಯಕ್ಕಾಗಿ ಆಗ್ರಹಿಸುತ್ತೇವೆ. ಸರ್ಕಾರ ಉಚಿತ ಸೌದೆ ಯೋಜನೆಯನ್ನು ಘೋಷಿಸಲಿ ಎಂದು ಆಗ್ರಹಿಸುತ್ತೇವೆ ಎಂದರು.
ಇದನ್ನೂ ಓದಿ:ಬಿಬಿಎಂಪಿ ಚುನಾವಣೆ ಬಗ್ಗೆ ಸುಪ್ರೀಂ ತೀರ್ಪು ಸ್ವಾಗತಾರ್ಹ: ಹೆಚ್ಡಿಕೆ
ಮಾಜಿ ಮೇಯರ್ ಪದ್ಮಾವತಿ ಮಾತನಾಡಿ, ಅಡುಗೆ ಅನಿಲ ಇಂದು 1112 ರೂ. ಆಗಿದೆ. ಕೇಂದ್ರ ಸರ್ಕಾರ ಉಜ್ವಲ ಯೋಜನೆ ತರುತ್ತೇವೆ ಎಂದು ಹೇಳಿದರು. ಈ ಯೋಜನೆ ಏನಾಯಿತು ಎಂದು ಈಗ ಹುಡುಕಬೇಕಾಗಿದೆ. ಈ ಯೋಜನೆಗಾಗಿ ಕೇಂದ್ರ ಸರ್ಕಾರ ಪ್ರತಿ ಗ್ರಾಹಕರಿಂದ 200 ರೂ. ಸಂಗ್ರಹಿಸಿದರು. ಈ ಹಣ ಎಲ್ಲಿ ಹೊಯಿತು? ಎಲ್ಲ ಬಡ ಮಹಿಳೆಯರಿಗಗೆ ಈ ವ್ಯವಸ್ಥೆ ಸಿಕ್ಕಿದೆಯಾ? ಪೆಟ್ರೋಲ್ 111, ಡೀಸೆಲ್ 95, ಅಡುಗೆ ಅನಿಲ 112 ರೂ. ಆಗಿದೆ. ಜನ ಸಾಮಾನ್ಯರು ಕೋವಿಡ್ ಮಹಾಮಾರಿಯಿಂದ ಚೇತರಿಸಿಕೊಳ್ಳುವ ಹೊತ್ತಲ್ಲಿ ಈ ಬೆಲೆ ಏರಿಕೆಯಾಗಿದೆ. ನೀರಿನ ಬಿಲ್ ಪ್ರಮಾಣ ಹೆಚ್ಚಾಗಿದ್ದು, ಪ್ರತಿ ಕುಟುಂಬ 800 ರೂ. ಕಟ್ಟಬೇಕಿದೆ. ವಿದ್ಯುತ್ ಬಿಲ್ ಕೂಡ ಏರಿಕೆಯಾಗಿದೆ ಎಂದು ವಾಗ್ದಾಳಿ ನಡೆಸಿದರು.