ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಜ್ಞಾಪಕಾರ್ಥವಾಗಿ ಕರ್ನಾಟಕ ಟಿವಿ ಅಸೋಸಿಯೇಷನ್ ವತಿಯಿಂದ ಇಂದು ಜಯನಗರದ ಹೆಚ್ ಎನ್ ಕಲಾಕ್ಷೇತ್ರದಲ್ಲಿ ಅಪ್ಪು ಅಮರ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಕಂದಾಯ ಸಚಿವ ಆರ್.ಆಶೋಕ್, ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಅಧ್ಯಕ್ಷ ಶಿವಕುಮಾರ್ ಸೇರಿದಂತೆ ಎಲ್ಲಾ ಕಿರುತೆರೆಯ ಕಲಾವಿದರು, ನಿರ್ದೇಶಕರು, ತಂತ್ರಜ್ಞಾನರು, ಪೋಷಕ ಕಲಾವಿದರು ಭಾಗಿಯಾಗಿದ್ದರು.
ಕಾರ್ಯಕ್ರಮದ ಹೈಲೆಟ್ಸ್ ಅಂದರೆ, ಪುನೀತ್ ರಾಜ್‍ಕುಮಾರ್ ಬಾಲ ನಟನಾಗಿ ಅಭಿನಯಿಸಿದ ಭಕ್ತ ಪ್ರಹ್ಲಾದ, ಬೆಟ್ಟದ ಹೂ, ಎರಡು ನಕ್ಷತ್ರಗಳು, ಭಾಗ್ಯವಂತ ಸಿನಿಮಾಗಳಿಗೆ ನಟ ನವೀನ್ ಕೃಷ್ಣ ಹಾಗೂ ತಂಡದವರು ಅಭಿನಯ ಮಾಡಿ ಅಪ್ಪು ಅಮರ ಅಂತಾ ಹೇಳಿದರು.
ಜೊತೆಗೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಬಾಲ್ಯದ ಫೊಟೋಗಳು ಹಾಗೂ ಅವರ ಚಿತ್ರಗಳ ಫೋಟೋಗಳನ್ನ ಲೇಸರ್ ಲೈಟ್ ಮೂಲಕ ಪ್ರದರ್ಶನ ಮಾಡಲಾಯಿತು.
100ಕ್ಕೂ ಹೆಚ್ಚು ಕಲಾವಿದರಿಂದ ನೇತ್ರದಾನ :ಇನ್ನು, ಪುನೀತ್ ರಾಜ್‍ಕುಮಾರ್ ಅವರ ಸ್ಫೂರ್ತಿಯಿಂದ 100ಕ್ಕೂ ಹೆಚ್ಚು ಕಲಾವಿದರು ತಮ್ಮ ನೇತ್ರಾದಾನ ಮಾಡಲು ಮುಂದಾಗಿದ್ದಾರೆ ಎಂದು ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಅಧ್ಯಕ್ಷ ಶಿವಕುಮಾರ್ ಹೇಳಿದರು.
(ಇದನ್ನೂ ಓದಿ:ಇನ್ನೊಂದು 4 ನಿಮಿಷದಲ್ಲಿ ಅಪ್ಪು ಆಸ್ಪತ್ರೆಗೆ ಹೋಗ್ತಿದ್ದ: ಟ್ರಾಫಿಕ್ ಸಮಸ್ಯೆ ಬಗ್ಗೆ ರಾಘಣ್ಣ ಮಾತು)
ರಸ್ತೆಗೆ ಪುನೀತ್ ಹೆಸರು :ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿ, ನಮ್ಮ ಜೊತೆ ಇಲ್ಲದೇ ಇದ್ದರೂ ಪುನೀತ್ ರಾಜ್‍ಕುಮಾರ್ ಮಾಡಿರೋ ಸಮಾಜಮುಖಿ ಕೆಲಸಗಳು ಬೇರೆಯವರಿಗೆ ಮಾದರಿ. ಪುನೀತ್ ಸದಾ ನಮ್ಮೊಂದಿಗೆ ಧೃವತಾರೆಯಾಗಿ ಉಳಿಯುತ್ತಾರೆ. ಪುನೀತ್ ಒಳ್ಳೆ ಕಲಾವಿದ, ವಿನಯವಂತ ಹಾಗೂ ಅವರ ನಗು ಶಾಶ್ವತ.
ಕಂದಾಯ ಸಚಿವ ಆರ್.ಅಶೋಕ್ ಮಾತು ನಾನು ಕೂಡ ರಾಜ್‍ಕುಮಾರ್ ಅಭಿಮಾನಿ. ನಾನು 16ನೇ ವಯಸ್ಸಿನಲ್ಲೇ ರಾಜ್ ಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷ ಆಗಿದ್ದೆ. ಆ ಸಮಯದಲ್ಲಿ ಡಾ.ರಾಜ್ ಕುಮಾರ್ ನಮ್ಮ ಮನೆಗೆ ಬಂದಿದ್ದರು. ಪುನೀತ್ ಅವರ ಸ್ಫೂರ್ತಿಯಿಂದ ಜನರು ಕಣ್ಣು, ಅಂಗಾಂಗಗಳನ್ನ ದಾನ ಮಾಡಿದ್ದಾರೆ.
ಹೀಗಾಗಿ, ನಾನು ಪುನೀತ್ ಅವರನ್ನು ಧರ್ಮದ ರಾಯಭಾರಿ ಅಂತಾ ಕರೆಯುತ್ತೇನೆ. ಹಾಗೆಯೇ ರಸ್ತೆಗೆ ಪುನೀತ್ ರಾಜ್‍ಕುಮಾರ್ ಹೆಸರಿಡಲು ತೀರ್ಮಾನ ಮಾಡಿದ್ದೇನೆ ಎಂದು ಸಚಿವ ಆರ್.ಅಶೋಕ್ ಹೇಳಿದರು.
ಅಪ್ಪುಗೆ ಸೆಲ್ಯೂಟ್ :ರಾಘವೇಂದ್ರ ರಾಜ್‍ಕುಮಾರ್ ಮಾತನಾಡಿ, ಅಪ್ಪು ತುಂಬಾ ಅದೃಷ್ಟವಂತ. ಯಾಕೆಂದರೆ, ಹುಟ್ಟಿದ ಎರಡು ತಿಂಗಳಿಗೆ ಸಿನಿಮಾದಲ್ಲಿ ಅಭಿನಯಿಸಿದ್ದ, ಮೂರು ವರ್ಷಕ್ಕೆ ಹಾಡು ಹಾಡಿದ, ತಂದೆಯ ಸಿನಿಮಾಗಳಲ್ಲಿ ಅಭಿನಯಿಸಿದ.
ಅಪ್ಪು ಹುಟ್ಟಿದ ವರ್ಷ ತಂದೆಗೆ ಡಾಕ್ಟರೇಟ್ ಬಂತು, ಬೆಂಗಳೂರಲ್ಲಿ ಮನೆ ತೆಗೆದುಕೊಂಡಿದ್ವಿ, ಎಸ್ಟೇಟ್ ತೆಗೆದುಕೊಂಡಿದ್ವಿ, ವಜ್ರೇಶ್ವರಿ ಸಂಸ್ಥೆ ಆರಂಭಿಸಿದೆವು ಎಂದು ಹೇಳಿದರು.
ಶಂಕರಾಚಾರ್ಯ, ವಿವೇಕಾನಂದರಂತೆ ಕಡಿಮೆ ವಯಸ್ಸಿಗೆ ದೊಡ್ಡ ದೊಡ್ಡ ಕೆಲಸಗಳನ್ನ ಮಾಡಿ, ಚಿಕ್ಕವಯಸ್ಸಿನಲ್ಲೇ ನಿಧನರಾಗಿದ್ದಾರೆ. ಅದೇ ರೀತಿ ಅಪ್ಪು ಕೂಡ ಮಾಡಿ ಹೋಗಿದ್ದಾರೆ. ಪುನೀತ್ ನಿಧನರಾದಾಗ ಸಿಎಂ ಮುಖ್ಯಮಂತ್ರಿಯಾಗಿ ಬಂದಿರಲಿಲ್ಲ, ಕಾಮನ್ ಮ್ಯಾನ್ ಆಗಿ ಬಂದಿದ್ದರು. ಇಷ್ಟು ದಿನ ಪುನೀತ್ರನ್ನು ಅಪ್ಪಿಕೊಳ್ಳುತ್ತಿದ್ದೆ. ಇನ್ನು ಸೆಲ್ಯೂಟ್ ಹೊಡೆಯುತ್ತೇನೆ ಎಂದರು.