ಬೆಂಗಳೂರು: ದಿ. ನಟ ಪುನೀತ್ ರಾಜ್ಕುಮಾರ್ ಸಮಾಧಿ ನೋಡಲು ಕಂಠೀರವ ಸ್ಟುಡಿಯೋ ಬಳಿ ಅಭಿಮಾನಿಗಳ ದಂಡು ಹರಿದು ಬರುತ್ತಿದೆ. ಇಂದಿನ ಹಾಲು-ತುಪ್ಪ ವಿಧಿವಿಧಾನ ಕಾರ್ಯ ಹಿನ್ನೆಲೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಅಪ್ಪು ಸಮಾಧಿಯತ್ತ ಧಾವಿಸುತ್ತಿರುವ ಅಭಿಮಾನಿ ಬಳಗ ಪುನೀತ್ ರಾಜ್ಕುಮಾರ್ ಸಮಾಧಿ ಬಳಿ ಹಾಲು ತುಪ್ಪ ಕಾರ್ಯದ ಸಿದ್ಧತೆ ನಡೆಯುತ್ತಿದ್ದರೆ, ಮತ್ತೊಂದೆಡೆ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಸಮಾಧಿಗೆ ನಮಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಆದ್ರೆ ಬೆಂಗಳೂರಿನ ನಗರ ಜಿಲ್ಲಾಧಿಕಾರಿ ಮಂಜುನಾಥ್ ಇನ್ನೂ ಎರಡು ದಿನಗಳ ಕಾಲ ಅವಕಾಶ ಇಲ್ಲ ಎಂದು ತಿಳಿಸಿದ್ದಾರೆ. ಆದರೂ ರಾಜ್ಕುಮಾರ್ ಸಮಾಧಿ ಬಳಿ ಸಾಕಷ್ಟು ಸಂಖ್ಯೆಯಲ್ಲಿ ಕನ್ನಡ ಬಾವುಟ ಹಿಡಿದು ಅಭಿಮಾನಿಗಳು ಆಗಮಿಸುತ್ತಿದ್ದಾರೆ.
ಪುನೀತ್ ರಾಜ್ಕುಮಾರ್ ಸಮಾಧಿ ಹೆಚ್ಚಿನ ಸಂಖ್ಯೆಯಲ್ಲಿ ಅಪ್ಪು ಅಭಿಮಾನಿಗಳು ಬರುವ ಸಾಧ್ಯತೆ ಇರುವುದರಿಂದ ಭದ್ರತೆ ನಿಟ್ಟಿನಲ್ಲಿ ಆರ್.ಎ.ಎಫ್, ಕೆ.ಎಸ್.ಆರ್.ಪಿ ತುಕಡಿ ನಿಯೋಜನೆ ಮಾಡಲಾಗಿದೆ.
ಇದನ್ನೂ ಓದಿ:ಅಪ್ಪುಗೆ ಇಂದು ಹಾಲು ತುಪ್ಪ ವಿಧಿವಿಧಾನ ಕಾರ್ಯ: ಪುನೀತ್ ಸಮಾಧಿ ಬಳಿ ಬಿಗಿ ಪೊಲೀಸ್ ಬಂದೋಬಸ್ತ್
ಇಂದು ಕುಟುಂಬಸ್ಥರಿಂದ ಪುನೀತ್ ಸಮಾಧಿಗೆ ಪೂಜೆ ನೆರವೇರಲಿದ್ದು, ರಾಜ್ ಕುಟುಂಬದವರು, ಸ್ನೇಹಿತರು, ಚಿತ್ರರಂಗದ ಸ್ನೇಹಿತರು ಭಾಗಿಯಾಗಿದ್ದಾರೆ. ಸದ್ಯಕ್ಕೆ ಅಭಿಮಾನಿಗಳ ಪ್ರವೇಶಕ್ಕೆ ಅನುಮತಿಯಿಲ್ಲ. ಹೀಗಾಗಿ ಕಂಠೀರವ ಸ್ಟುಡಿಯೋ ಬಳಿ ಬ್ಯಾರಿಕೇಡ್ ಹಾಕಿ ಬಿಗಿ ಭದ್ರತೆ ಒದಗಿಸಲಾಗಿದೆ.
ಪುನೀತ್ ರಾಜ್ಕುಮಾರ್ ಸಮಾಧಿ ಬಳಿ ಗಣ್ಯರ ಆಗಮನ ಸಮಾಧಿ ಬಳಿ ರಾಘವೇಂದ್ರ ರಾಜ್ ಕುಮಾರ್, ಅವರ ಪುತ್ರ ವಿನಯ್ ರಾಜ್ ಕುಮಾರ್ ಆಗಮಿಸಿದ್ದು, ಇನ್ನೂ ಹಲವು ಗಣ್ಯರು ಆಗಮಿಸುತ್ತಿದ್ದಾರೆ. ಪುನೀತ್ ಪಾರ್ಥಿವ ಶರೀರದ ಅಂತ್ಯಕ್ರಿಯೆಯ ಉಸ್ತುವಾರಿ ವಹಿಸಿದ್ದ ಸಚಿವ ಗೋಪಾಲಯ್ಯ, ಮುನಿರತ್ನ ಇಂದಿನ ಹಾಲು ತುಪ್ಪದ ಕಾರ್ಯಕ್ಕೂ ಸರ್ಕಾರದ ಪರವಾಗಿ ಉಸ್ತುವಾರಿ ವಹಿಸಿದ್ದಾರೆ.
ಕುಟುಂಬಸ್ಥರ ಆಗಮನದ ಹಿನ್ನೆಲೆ ಸ್ಥಳದಲ್ಲಿ ಉತ್ತರ ವಿಭಾಗದ ಡಿ.ಸಿ.ಪಿ ವಿನಾಯಕ್ ಪಾಟೀಲ್ ಪರಿಶೀಲನೆ ನಡೆಸಿದರು.