ಬೆಂಗಳೂರು: ಕೋಟ್ಯಂತರ ಅಭಿಮಾನಿಗಳ ಕಣ್ಮಣಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಗಲಿ ಇಂದಿಗೆ 11 ದಿನ ಕಳೆದಿದೆ. ಈ ಹಿನ್ನೆಲೆ ಇಂದು 11ನೇ ದಿನದ ಪುಣ್ಯ ತಿಥಿ ಕಾರ್ಯ ಹಮ್ಮಿಕೊಳ್ಳಲಾಗಿದೆ.
ಸದಾಶಿವನಗರದಲ್ಲಿರುವ ಮನೆಯಲ್ಲೇ ತಿಥಿ ಕಾರ್ಯ ನಡೆಯಲಿದೆ. ಚಿಕ್ಕಪ್ಪನ ಪುಣ್ಯ ತಿಥಿ ಕಾರ್ಯ ನೆರವೇರಿಸುವ ಮೂಲಕ ವಿನಯ್ ರಾಜ್ ಕುಮಾರ್ ಕೇಶಮುಂಡನ ಮಾಡಿಸಿಕೊಂಡು ಅಗಲಿದ ಅಪ್ಪುಗೆ ಪಿಂಡ ಪ್ರದಾನ ಮಾಡಲಿದ್ದಾರೆ.
ಬೆಳಗ್ಗೆ 11 ಗಂಟೆ ನಂತರ ಪುಣ್ಯತಿಥಿ ಕಾರ್ಯ ಜರುಗಲಿದ್ದು ಕುಟುಂಬಸ್ಥರು, ಹತ್ತಿರದ ಸಂಬಂಧಿಗಳು, ಚಿತ್ರರಂಗದ ಪ್ರಮುಖರು, ರಾಜಕೀಯ ಗಣ್ಯರು ಭಾಗಿಯಾಗಲಿದ್ದಾರೆ. ನಂತರ ಕಂಠೀರವ ಸ್ಟುಡಿಯೋದಲ್ಲಿ ಪುನೀತ್ ಸಮಾಧಿಗೆ ಪೂಜೆ ಸಲ್ಲಿಸಲಿದ್ದಾರೆ.
11 ನೇ ದಿನದ ಪುಣ್ಯತಿಥಿ ಹಿನ್ನೆಲೆ ನಿನ್ನೆಯಿಂದಲೇ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಮಂಗಳವಾರ ಅಭಿಮಾನಿಗಳಿಗೆ ಅನ್ನ ಸಂತರ್ಪಣೆ ನಡೆಸಲು ಏರ್ಪಾಡು ಮಾಡಲಾಗಿದೆ ಎಂದು ತಿಳಿದುಬಂದಿದೆ.