ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನಕ್ಕೆ ಸ್ಟಾರ್ ನಟರು, ರಾಜಕೀಯ ಮುಖಂಡರು ಸೇರಿದಂತೆ ಲಕ್ಷಾಂತರ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ನೆಚ್ಚಿನ ನಟ ಇನ್ನಿಲ್ಲ ಎಂಬ ಸುದ್ದಿ ಗೊತ್ತಾಗುತ್ತಿದ್ದಂತೆ ರಾಜ್ಯದ ಮೂಲೆ ಮೂಲೆಗಳಿಂದಲೂ ಜನರು ತಂಡೋಪ-ತಂಡವಾಗಿ ಬೆಂಗಳೂರಿನತ್ತ ಹರಿದು ಬರುತ್ತಿದ್ದು, ಹೀಗಾಗಿ ಇಂದು ದಿನವಿಡೀ ಅವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ನೆಚ್ಚಿನ 'ರಾಜಕುಮಾರ್'ನ ಕಣ್ತುಂಬಿಕೊಳ್ಳಲು ನಗರದ ಕಂಠೀರವ ಸ್ಟೇಡಿಯಂಗೆ ಲಕ್ಷಾಂತರ ಅಭಿಮಾನಿಗಳು ಭೇಟಿ ನೀಡುತ್ತಿದ್ದಾರೆ. ಹೀಗಾಗಿ ಶನಿವಾರ ಕೂಡ ಬೇರೆ ಬೇರೆ ರಾಜ್ಯಗಳು ಸೇರಿದಂತೆ ಲಕ್ಷಾಂತರ ಜನರು ನೆಚ್ಚಿನ ನಟನ ಕಣ್ತುಂಬಿಕೊಳ್ಳಲಿದ್ದಾರೆ.
ಇದನ್ನೂ ಓದಿರಿ:ಪುನೀತ್ ರಾಜ್ಕುಮಾರ್ ನಿಧನ: ರಾತ್ರಿ ಪೂರ್ತಿ ತಂಡೋಪ ತಂಡವಾಗಿ ಹರಿದು ಬಂದ ಅಭಿಮಾನಿಗಳು
ಇಂದು ಕೂಡ ಅಂತಿಮ ದರ್ಶನಕ್ಕೆ ಅವಕಾಶ ನೀಡಿರುವ ಕಾರಣ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಲಾಯಿತು. ಯಾವುದೇ ರೀತಿಯ ಲೋಪದೋಷ ಹಾಗೂ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ. ಹೀಗಾಗಿ ಇಡೀ ನಗರದಲ್ಲಿ ಪೊಲೀಸ್ ಸರ್ಪಗಾವಲು ಹಾಕಿದೆ. ಇದರ ಜೊತೆಗೆ ಯಾವುದೇ ರೀತಿಯ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಪೊಲೀಸರು ಮನವಿ ಮಾಡಿದ್ದಾರೆ.
ನಟನ ನಿಧನದಿಂದಾಗಿ ಸ್ಯಾಂಡಲ್ವುಡ್ ಮಾತ್ರವಲ್ಲದೇ ಬೇರೆ ಭಾಷೆ ಚಿತ್ರರಂಗ ಕೂಡ ಶಾಕ್ಗೊಳಗಾಗಿದೆ. ಹೀಗಾಗಿ ಇಂದು ಕೂಡ ಆಂಧ್ರಪ್ರದೇಶ, ತೆಲಂಗಾಣ, ಕೇರಳ ಸೇರಿದಂತೆ ವಿವಿಧ ರಾಜ್ಯಗಳಿಂದ ಪ್ರಮುಖ ನಟರು ಆಗಮಿಸಿ, ಪುನೀತ್ ರಾಜ್ಕುಮಾರ್ ಅವರ ಪಾರ್ಥಿವ ಶರೀರದ ದರ್ಶನ ಪಡೆದುಕೊಳ್ಳುವ ಸಾಧ್ಯತೆ ಇದೆ.