ಕರ್ನಾಟಕ

karnataka

ಉದ್ಯೋಗ ಕಾರ್ಯಾಗಾರದ ವೇದಿಕೆಗೆ ಪುನೀತ್ ರಾಜ್ ಕುಮಾರ್ ‌ಹೆಸರು: ಸಚಿವ ನಿರಾಣಿ ತೀರ್ಮಾನ

By

Published : Nov 9, 2021, 7:59 PM IST

ಇದೇ 11 ರಂದು ಕಲಬುರಗಿಯಲ್ಲಿ ನಡೆಯಲಿರುವ 'ಉದ್ಯಮಿಯಾಗು ಉದ್ಯೋಗ ನೀಡು' ಕಾರ್ಯಾಗಾರದ ವೇದಿಕೆಗೆ ಪುನೀತ್‌ ರಾಜ್‌ಕುಮಾರ್‌ ಅವರ ಹೆಸರಿಡುವುದಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ನಿರ್ಧರಿಸಿದ್ದಾರೆ.

Puneet Raj Kumar name for workshop forum: Minister Nirani says in Bangalore
ಉದ್ಯೋಗ ಕಾರ್ಯಾಗಾರದ ವೇದಿಕೆಗೆ ಪುನೀತ್ ರಾಜ್ ಕುಮಾರ್ ‌ಹೆಸರು: ಸಚಿವ ನಿರಾಣಿ ತೀರ್ಮಾನ

ಬೆಂಗಳೂರು: ಕಲಬುರಗಿಯಲ್ಲಿ ಇದೇ 11 ರಂದು ನಡೆಯಲಿರುವ 'ಉದ್ಯಮಿಯಾಗು ಉದ್ಯೋಗ ನೀಡು' ಕಾರ್ಯಾಗಾರದ ವೇದಿಕೆಗೆ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಹೆಸರಿಡಲು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್.ನಿರಾಣಿ ಅವರು ತೀರ್ಮಾನಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಸಚಿವರು, ಕೇವಲ ಸಿನಿಮಾ ಕ್ಷೇತ್ರದಲ್ಲಿ ಮಾತ್ರ ಗುರುತಿಸಿಕೊಳ್ಳದ ಪುನೀತ್ ರಾಜ್‌ಕುಮಾರ್ ಅನೇಕ ಸಮಾಜ‌ ಸೇವೆಗಳಲ್ಲೂ ತೊಡಗಿಸಿಕೊಂಡಿದ್ದರು. ನಿಜ ಜೀವನದಲ್ಲಿ ಪುನೀತ್ ರಾಜ್ ಕುಮಾರ್ ರಾಜಕುಮಾರನಾಗಿಯೇ ಮೆರೆದರು. ಮುಂದಿನ ಯುವಜನಾಂಗಕ್ಕೆ ಅವರ ಹೆಸರು ಅಜಾರಮರಗೊಳಿಸಲು ಈ ಮಹತ್ವದ ತೀರ್ಮಾನವನ್ನು ತೆಗೆದುಕೊಂಡಿರುವುದಾಗಿ ನಿರಾಣಿ ಅವರು ಹೇಳಿದ್ದಾರೆ.

ಯುವಜನತೆಯು ಯಾರೊಬ್ಬರ ಮೇಲೆ ಅವಲಂಬಿತರಾಗದೆ, ಸ್ವಾವಲಂಬಿಗಳಾಗಿ ಬದುಕಬೇಕು ಎಂಬುದು ಅಪ್ಪು ಅವರ ಕನಸಾಗಿತ್ತು. ಅವರು ಕಂಡಿದ್ದ ಕನಸನ್ನು ನನಸು ಮಾಡುವ ಸಣ್ಣ ಪ್ರಯತ್ನ ಇದಾಗಿದೆ. ಪುನೀತ್​ ರಾಜ್​ಕುಮಾರ್​ ನಟನಾಗಿ ಮಾತ್ರವಲ್ಲ ನಿರ್ಮಾಪಕನಾಗಿಯೂ ಉದ್ಯಮಶೀಲತೆ ತೋರಿದರು. ಅವರು ಪಿಆರ್​ಕೆ ಪ್ರೊಡಕ್ಷನ್​ ಆರಂಭಿಸುವ ಮೂಲಕ ಸಿನಿಮಾ ನಿರ್ಮಾಣದಲ್ಲಿಯೂ ತೊಡಗಿಕೊಂಡಿದ್ದರು. ಹೊಸ ಪ್ರತಿಭೆಗಳಿಗೆ ಮಣೆ ಹಾಕುವ ಮೂಲಕ ಸ್ಯಾಂಡಲ್​ವುಡ್​​ನಲ್ಲಿ ಅವರು ಎಲ್ಲರಿಂದಲೂ ಮೆಚ್ಚುಗೆ ಗಳಿಸಿದ್ದರು ಎಂದು ನಿರಾಣಿ ಅವರು ಕೊಂಡಾಡಿದ್ದಾರೆ.

'ಪುನೀತ್‌ ಸಮಾಜ ಸೇವೆಯನ್ನು ಎಲ್ಲೂ ಬಹಿರಂಗಪಡಿಸಿರಲಿಲ್ಲ'

ಕೇವಲ ಸಿನಿಮಾ ಕ್ಷೇತ್ರವಲ್ಲದೆ, ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ವೃದ್ಧರು ಮತ್ತು ಅನಾಥರ ಪೋಷಣೆ ಜತೆಗೆ ಹೆಣ್ಣು ಮಕ್ಕಳಿಗೆ ಶಿಕ್ಷಣ ಧಾರೆ ಎರೆದಿದ್ದರು. ಗೋ ಶಾಲೆಗಳನ್ನು ಪೋಷಣೆ ಮಾಡುತ್ತಿದ್ದರು. ತಾನು ಸಮಾಜಕ್ಕೆ ಈ ಕೊಡುಗೆ ಕೊಟ್ಟಿದ್ದೇನೆ ಎಂದು ಎಲ್ಲೂ ಬಹಿರಂಗಪಡಿಸದೆ ಸಮಾಜ ಸೇವೆ ಮಾಡುತ್ತಿದ್ದರು. ಈ ಮೂಲಕ ದೊಡ್ಡಮನೆಯ ದೊಡ್ಡತನ ಮೆರೆದಿದ್ದರು. ಅಂತಹ ಮೇರುನಟ ನಮಗೆ ಎಂದೆಂದಿಗೂ ಮಾದರಿ ಎಂದು ನಿರಾಣಿ ಕೊಂಡಾಡಿದ್ದಾರೆ.

ತಮ್ಮ ನಡೆ, ನುಡಿ, ಸರಳತೆ, ಸಮಾಜ ಸೇವೆ ಮೂಲಕ ಯುವ ಜನತೆಗೆ ಮಾದರಿಯಾಗಿದ್ದ ಪುನೀತ್ ರಾಜ್ ಕುಮಾರ್ ಅವರ ಹೆಸರನ್ನು ಕಾರ್ಯಗಾರ ವೇದಿಕೆಗೆ ಇಡುವ ಮೂಲಕ ವಿಶೇಷ ರೀತಿಯಲ್ಲಿ ಗೌರವ ಸಲ್ಲಿಸಲಾಗುತ್ತಿದೆ. ಕಲಬುರಗಿ ಮಾತ್ರವಲ್ಲದೆ, ಮುಂದೆ ನಡೆಯಲಿರುವ ಮೈಸೂರು, ಬೆಳಗಾವಿ, ಕರಾವಳಿ ಭಾಗದ ಮಂಗಳೂರು ಹಾಗೂ ತುಮಕೂರಿನಲ್ಲಿ ಉದ್ಯಮಿಯಾಗು ಉದ್ಯೋಗ ನೀಡು ಕಾರ್ಯಕ್ರಮದ ವೇದಿಕೆಗೆ ಪುನೀತ್ ರಾಜ್ ಕುಮಾರ್ ಹೆಸರಿಡಲು ಸರ್ವಸಮ್ಮತದ ತೀರ್ಮಾನವನ್ನು ಸಚಿವರು ತೆಗೆದುಕೊಂಡಿದ್ದಾರೆ.

ಸೋಮವಾರ ನಡೆದ ಪುನೀತ್ ರಾಜ್‌ಕುಮಾರ್ ಅವರ 11 ದಿನದ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಸಚಿವ ನಿರಾಣಿ ಅವರು ಭಾಗವಹಿಸಿ ಆಗಲಿದ ಯುವನಟನಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದರು. ಸದಾಶಿವ ನಗರದಲ್ಲಿರುವ ಪುನೀತ್ ಅವರ ನಿವಾಸಕ್ಕೆ ಭೇಟಿ ನೀಡಿ ಅಪ್ಪು ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ‌ಗೌರವ ನಮನ ಸಲ್ಲಿಸಿದರು. ಬಳಿಕ ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಅವರಿಗೆ ಸಾಂತ್ವನ ಹೇಳಿದರು.

ABOUT THE AUTHOR

...view details