ಬೆಂಗಳೂರು: ರಸ್ತೆಗಳಲ್ಲಿ ಬೇಕಾಬಿಟ್ಟಿ ವಾಹನಗಳನ್ನು ನಿಲ್ಲಿಸಿ ಹೋಗುವಂತಿಲ್ಲ. ಒಂದು ವೇಳೆ ನಿಯಮ ಉಲ್ಲಂಘಿಸಿ ಸಾರ್ವಜನಿಕರಿಗೆ ಅಡಚಣೆಯಾಗುವ ರೀತಿ ವಾಹನ ನಿಲ್ಲಿಸಿರುವುದು ಕಂಡುಬಂದರೆ ಅಂತಹ ವಾಹನಗಳನ್ನು ಟೋಯಿಂಗ್ ಮಾಡಿ ದಂಡ ವಿಧಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಎಚ್ಚರಿಕೆ ನೀಡಿದ್ದಾರೆ.
ಶನಿವಾರ ನಗರದ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ನಡೆದ ಮಾಸಿಕ ಜನಸಂಪರ್ಕ ಸಭೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕೋರಮಂಗಲದ 1, 5 ಮತ್ತು 8ನೇ ಬ್ಲಾಕ್ ನಿವಾಸಿಗಳು ಸಭೆಯಲ್ಲಿ ಪಾಲ್ಗೊಂಡು ಆಯುಕ್ತರಿಗೆ ಹಲವು ಪ್ರಶ್ನೆಗಳನ್ನು ಕೇಳಿ ಅವರಿಂದ ಉತ್ತರ ಪಡೆದುಕೊಂಡರು.
ಸಾರ್ವಜನಿಕ ಸ್ಥಳಗಳು ಹಾಗೂ ಪಾದಚಾರಿ ರಸ್ತೆಗಳಲ್ಲಿ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸುವುದರಿಂದ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುತ್ತದೆ. ಹೀಗಾಗಿ, ಪ್ರತಿಯೊಬ್ಬ ನಾಗರಿಕರೂ ಇತರರಿಗೆ ತೊಂದರೆ ನೀಡದಂತೆ ವಾಹನ ಪಾರ್ಕಿಂಗ್ ಮಾಡಬೇಕು ಎಂದು ಸಾರ್ವಜನಿಗರಿಗೆ ಸಲಹೆ ನೀಡಿದರು.
ವಾಹನಗಳ ಮೂಲಕ ಹೆಚ್ಚು ಶಬ್ಧ ಮಾಡುವವರ ವಿರುದ್ಧ ಕ್ರಮ:
ರಾತ್ರಿ 11 ಗಂಟೆ ನಂತರ ಯುವಕರು ಹೆಚ್ಚಿನ ಶಬ್ದ ಬರುವ ಹಾರ್ನ್ ಹಾಗೂ ಸೈಲೆನ್ಸರ್ ಹಾಕಿಕೊಂಡು ತಿರುಗುತ್ತಾ ಶಾಂತಿಭಂಗ ಮಾಡುತ್ತಿದ್ದಾರೆ ಎಂಬ ಸಾರ್ವಜನಿಕರ ಮಾತಿಗೆ ಉತ್ತರಿಸಿದ ಪೊಲೀಸ್ ಆಯುಕ್ತರು, ಯಾವ ಪ್ರದೇಶದಲ್ಲಿ ಯುವಕರು ಆ ರೀತಿ ಬೈಕ್ ಚಲಾಯಿಸುತ್ತಾರೆ ಎನ್ನುವ ಬಗ್ಗೆ ಮಾಹಿತಿ ನೀಡಿದರೆ ಕೂಡಲೇ ಅಂತಹವರ ವಾಹನಗಳನ್ನು ಸೀಜ್ ಮಾಡಿ ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು. ಅಂತಹ ಕಡೆಗಳಲ್ಲಿ ಹೆಚ್ಚು ಗಸ್ತು ತಿರುಗುವಂತೆ ಪೊಲೀಸರಿಗೆ ಸ್ಥಳದಲ್ಲಿಯೇ ಸೂಚಿಸಿದರು.
ಮಕ್ಕಳ ಅಪಹರಣ ಬಗ್ಗೆ ಎಚ್ಚರ:
ಕೋರಮಂಗಲದ ಒಂದನೇ ಹಂತದ ಉದ್ಯಾನದಲ್ಲಿ ಮಕ್ಕಳು ಆಟವಾಡುವಾಗ ದುಷ್ಕರ್ಮಿಗಳು ಆಮಿಷವೊಡ್ಡಿ ಅಪಹರಿಸಲು ಯತ್ನಿಸುತ್ತಾರೆ ಎಂದು ನಿವಾಸಿಯೊಬ್ಬರು ಸಭೆಯಲ್ಲಿ ದೂರಿದರು. ಇದಕ್ಕೆ ಪ್ರತಿಕ್ರಿಯಿಸಿ, ಈವರೆಗೂ ಯಾವುದೇ ಮಗು ಅಪಹರಣವಾಗಿಲ್ಲ. ಆದರೆ, ಮಕ್ಕಳ ಅಪಹರಣ ವಿಚಾರದಲ್ಲಿ ತುಂಬಾ ಜಾಗೃತರಾಗಿದ್ದೇವೆ. ಮುಂದೆಯೂ ಯಾವುದೇ ಅಹಿತಕರ ಘಟನೆಯಾಗದಂತೆ ಎಚ್ಚರ ವಹಿಸಲಾಗುವುದು. ಉದ್ಯಾನಗಳಿರುವ ಸ್ಥಳಗಳಲ್ಲಿ ಸಬ್ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಗಸ್ತು ಹೆಚ್ಚಿಸಲಾಗುವುದು ಎಂದರು.
ಅವೈಜ್ಞಾನಿಕ ರಸ್ತೆ ಉಬ್ಬು:
ನಗರದಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಲು ರಸ್ತೆ ಗುಂಡಿ ಹಾಗೂ ಅವೈಜ್ಞಾನಿಕ ರಸ್ತೆ ಉಬ್ಬುಗಳೇ ಕಾರಣ ಎಂದು ಸಾರ್ವಜನಿಕರು ದೂರಿದರು. ಇದಕ್ಕೆ ಉತ್ತರಿಸಿದ ಪೊಲೀಸ್ ಆಯುಕರು, ಕೆಲ ರಸ್ತೆಯಲ್ಲಿ ಮಿತಿಗಿಂತ ಹೆಚ್ಚಿನ ವೇಗದಲ್ಲಿ ವಾಹನಗಳನ್ನು ಚಲಾಯಿಸುತ್ತಾರೆ. ಹಾಗಾಗಿ, ರಸ್ತೆ ಉಬ್ಬುಗಳನ್ನು ನಿರ್ಮಿಸಲಾಗಿದೆ. ಯಾವ ರಸ್ತೆಗಳಲ್ಲಿ ಅವೈಜ್ಞಾನಿಕವಾಗಿ ಉಬ್ಬುಗಳಿವೆಯೋ ಅವುಗಳನ್ನು ಸಂಚಾರ ಪೊಲೀಸರು ಪರಿಶೀಲಿಸಿ ತೆರವುಗೊಳಿಸಲಿದ್ದಾರೆ ಎಂದು ಹೇಳಿದರು.