ಬೆಂಗಳೂರು: ಶುಕ್ರವಾರದಿಂದ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದೆ. ಸುವ್ಯವಸ್ಥಿತವಾಗಿ ಪರೀಕ್ಷೆ ನಡೆಯಲು, ಅಕ್ರಮಕ್ಕೆ ಬ್ರೇಕ್ ಹಾಕಲು ಪಿಯು ಬೋರ್ಡ್ ಸಜ್ಜಾಗಿದೆ. ರಾಜ್ಯಾದ್ಯಂತ ಒಟ್ಟು 1,076 ಪರೀಕ್ಷಾ ಕೇಂದ್ರಗಳಿವೆ. ಅವುಗಳ ಸುತ್ತ 200 ಮೀಟರ್ ಸ್ಥಳವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿದೆ.
ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಚೇರಿಗಳಲ್ಲಿ ಪರೀಕ್ಷೆಗೆ ಸಂಬಂಧಿಸಿದ ಗೌಪ್ಯ ವಸ್ತುಗಳನ್ನು ಎಲ್ಲಾ ಜಿಲ್ಲಾ ಖಜಾನೆಗಳಲ್ಲಿ ಇರಿಸಲಾಗುತ್ತದೆ. ಖಜಾನೆಯ ಒಳಗೆ ಮತ್ತು ಹೊರಗೆ 24x7 ಸಿಸಿಟಿವಿ ಕಣ್ಗಾವಲು ಇರಲಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯಾದಗಂತೆ ಕ್ರಮವಹಿಸಲಾಗಿದೆ. ಜಿಲ್ಲೆಯಲ್ಲಿ ಪ್ರಶ್ನೆ ಪತ್ರಿಕೆಗಳ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳಿಗೆ ಉತ್ತೇಜನ ನೀಡುವಂತಹ ವ್ಯಕ್ತಿಗಳ ವಿರುದ್ಧ ದಂಡದ ಜೊತೆಗೆ 1973ರ ಸೆಕ್ಷನ್ 107 ಮತ್ತು 110ರ ಅಡಿಯಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆಗಳನ್ನು ನೀಡಲಾಗಿದೆ.
ಪರೀಕ್ಷಾ ಕೇಂದ್ರದ ಸುತ್ತ ಸಂಪೂರ್ಣ ಪೊಲೀಸ್ ಬಂದೋಬಸ್ತ್ ಒದಗಿಸಲು ಪೊಲೀಸ್ ಇಲಾಖೆಗೆ ಪಿಯು ಬೋರ್ಡ್ ಮನವಿ ಮಾಡಿದೆ. ಪರೀಕ್ಷಾ ದಿನಗಳಂದು ಪರೀಕ್ಷಾ ಕೇಂದ್ರಗಳಿಗೆ ಅಗತ್ಯ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಪರೀಕ್ಷೆಗೆ ಸಂಬಂಧಿಸಿದ ಎಲ್ಲಾ ಕಾರ್ಯಗಳು ಸಂಪೂರ್ಣವಾಗಿ ಪೊಲೀಸ್ ಬಂದೋಬಸ್ತ್ನಲ್ಲಿ ಮಾಡಲಾಗುತ್ತಿದೆ.