ಕರ್ನಾಟಕ

karnataka

ETV Bharat / city

ಕೇಂದ್ರದ ನೀತಿ ವಿರುದ್ಧ ಮಾ.16ಕ್ಕೆ ಬೃಹತ್‌ ಪ್ರತಿಭಟನೆ: ಖಾಸಗೀಕರಣ ವಿರೋಧಿ ವೇದಿಕೆಯ ನಿರ್ಧಾರ - ಖಾಸಗೀಕರಣ ವಿರೋಧಿಸಿ ಪ್ರತಿಭಟನೆ

ಇತ್ತೀಚಿನ ವರ್ಷಗಳಲ್ಲಿ ಕೇಂದ್ರ ಸರಕಾರ ನಷ್ಟದ ಕಾರಣ ನೀಡಿ ಲಾಭದಲ್ಲಿರುವ ಉದ್ಯಮಗಳನ್ನು ಖಾಸಗೀಕರಣ ಮಾಡಲು ಹೊರಟಿದೆ. ದೇಶದ ಜನರಿಗೆ ಉದ್ಯೋಗಾವಕಾಶ ಒದಗಿಸಲು ಸ್ಥಾಪಿಸಲಾದ ಕಾರ್ಖಾನೆಗಳನ್ನು ಖಾಸಗೀಕರಣ ಮಾಡಲಾಗುತ್ತಿದೆ ಎಂದು ಸರ್ಕಾರದ ವಿರುದ್ಧ ಹನುಮಂತಯ್ಯ ಹರಿಹಾಯ್ದರು.

psu-employees-protest-on-central-government
ಖಾಸಗೀಕರಣ ವಿರೋಧಿ ವೇದಿಕೆಯ ಸಭೆ

By

Published : Mar 2, 2021, 2:53 AM IST

Updated : Mar 2, 2021, 3:19 AM IST

ಬೆಂಗಳೂರು: ದೇಶದ ಸಾರ್ವಜನಿಕ ಉದ್ಯಮಗಳನ್ನು ಖಾಸಗೀಕರಣಗೊಳಿಸುವುದರ ವಿರುದ್ಧ ಸಂಘಟಿತರಾಗಿ ಹೋರಾಟ ಮಾಡುವ ಉದ್ದೇಶದಿಂದ ಮಾರ್ಚ್‌ 16ರಂದು ಬೆಂಗಳೂರಿನಲ್ಲಿ ಬೃಹತ್‌ ಹೋರಾಟವನ್ನು ಆಯೋಜಿಸುವುದಾಗಿ ಖಾಸಗೀಕರಣ ವಿರೋಧಿ ವೇದಿಕೆಯ ವತಿಯಿಂದ ಸಭೆಯಲ್ಲಿ ತಿರ್ಮಾನಿಸಲಾಗಿದೆ.

ಸಭೆಯಲ್ಲಿ ಭಾಗವಹಿಸಿದ್ದ ಎಲ್ಲಾ ಸಂಘಟನೆಗಳ ಮುಖಂಡರುಗಳ ಮಾತುಗಳನ್ನು ಕೇಳಿದ ನಂತರ ಮಾತನಾಡಿದ ಖಾಸಗೀಕರಣ ವಿರೋಧಿ ಸಮಿತಿಯ ಸಂಚಾಲಕಿ ಎಸ್‌.ವರಲಕ್ಷ್ಮಿ, ಖಾಸಗೀಕರಣದ ವಿರುದ್ದ ಎಲ್ಲಾ ಸಂಘಟನೆಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ವಿರೋಧ ವ್ಯಕ್ತಪಡಿಸುತ್ತಲೇ ಬಂದಿವೆ. ಹಲವಾರು ಸಂಘ ಸಂಸ್ಥೆಗಳೂ ಕೂಡಾ ಇದಕ್ಕೆ ಧ್ವನಿಗೂಡಿಸಿವೆ. ಆದರೆ, ಪ್ರತ್ಯೇಕವಾಗಿ ನಡೆಸುವ ಹೋರಾಟವನ್ನು ಒಗ್ಗಟ್ಟಿನ ಧ್ವನಿಯಲ್ಲಿ ಮಾಡಬೇಕು ಎನ್ನುವ ಉದ್ದೇಶ ದುಂಡು ಮೇಜಿನ ಸಭೆಯಲ್ಲಿ ವ್ಯಕ್ತವಾಗಿರುವುದು ಬಹಳ ಸಂತಸದ ವಿಷಯವಾಗಿದೆ ಎಂದರು.

ಮಾರ್ಚ್‌ 16 ರಂದು ಬೆಂಗಳೂರಿನಲ್ಲಿ ಬಿಎಸ್‌ಎನ್‌ಎಲ್‌, ಬ್ಯಾಂಕುಗಳು, ವಿಮಾ ಕ್ಷೇತ್ರ, ವಿದ್ಯುತ್‌ ಕ್ಷೇತ್ರ, ಬಿಇಎಂಎಲ್‌ ಸೇರಿದಂತೆ ಎಲ್ಲಾ ಸಾರ್ವಜನಿಕ ಉದ್ಯಮದ ಕಾರ್ಮಿಕರು ಭಾಗವಹಿಸಲಿದ್ದಾರೆ. ಈ ಪ್ರತಿಭಟನೆಯ ಮೂಲಕ ನಮ್ಮ ವಿಧಾನಸಭೆಯಲ್ಲಿ ರಾಜ್ಯದ ಸಾರ್ವಜನಿಕ ಉದ್ಯಮಗಳನ್ನು ಖಾಸಗೀಕರಗೊಳಿಸದಂತೆ ನಿರ್ಣಯ ಕೈಗೊಳ್ಳುವಂತೆ ಒತ್ತಾಯಿಸುವ ಗುರಿಯನ್ನು ಹೊಂದಿದ್ದೇವೆ ಎಂದು ವರಲಕ್ಷ್ಮಿ ಹೇಳಿದರು.

'ಕೇಂದ್ರದಿಂದ ಮೀಸಲಾತಿ ಅಶಕ್ತಗೊಳಿಸುವ ಹುನ್ನಾರ'

ಖಾಸಗೀಕರಣ ವಿರೋಧಿ ವೇದಿಕೆ ಬೆಂಗಳೂರು ಶಾಸಕರ ಭವನದ ಸಭಾಂಗಣದಲ್ಲಿ ಆಯೋಜಿಸಿದ್ದ ಸಾರ್ವಜನಿಕ ರಂಗ ಮತ್ತು ಅಭಿವೃದ್ದಿ ಎನ್ನುವ ದುಂಡು ಮೇಜಿನ ಸಭೆಯಲ್ಲಿ ಸಭೆಯಲ್ಲಿ ಬಿಇಎಂಎಲ್ ಕಾರ್ಮಿಕ ಸಂಘದ ಅಧ್ಯಕ್ಷ ಹಾಗೂ ವೇದಿಕೆಯ ಸಹ ಸಂಚಾಲಕರು ದೊಮ್ಮಲೂರು ಶ್ರೀನಿವಾಸ ರೆಡ್ಡಿ ನೀಡಿದ ಮನವಿಯನ್ನು ಸ್ವೀಕರಿಸಿ ರಾಜ್ಯಸಭಾ ಸದಸ್ಯ ಎಲ್‌ ಹನುಮಂತಯ್ಯ ಮಾತನಾಡಿ, ದೇಶದ ಸಂವಿಧಾನದಲ್ಲಿ ಸಾಮಾಜಿಕವಾಗಿ ಕೆಳ ಹಂತದ ವ್ಯಕ್ತಿಗಳನ್ನು ಮೇಲಕ್ಕೆತ್ತುವ ಕಾರಣದಿಂದ ಮೀಸಲಾತಿಯನ್ನು ನೀಡಲಾಗಿತ್ತು ಎಂದರು

ಇದೇ ರೀತಿ ದೇಶದ ಆರ್ಥಿಕ ಪರಿಸ್ಥಿತಿ ಹಾಗೂ ದೇಶದ ಅಭಿವೃದ್ದಿಗೆ ಅತ್ಯಂತ ಅಗತ್ಯವಿರುವ ಉದ್ಯಮಗಳನ್ನು ಲಾಭದ ಉದ್ದೇಶವೇ ಇಲ್ಲದೆ ಸ್ಥಾಪಿಸಲಾಗಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಕೇಂದ್ರ ಸರಕಾರ ನಷ್ಟದ ಕಾರಣ ನೀಡಿ ಲಾಭದಲ್ಲಿರುವ ಉದ್ಯಮಗಳನ್ನು ಖಾಸಗೀಕರಣ ಮಾಡಲು ಹೊರಟಿದೆ. ದೇಶದ ಜನರಿಗೆ ಉದ್ಯೋಗಾವಕಾಶ ಒದಗಿಸಲು ಸ್ಥಾಪಿಸಲಾದ ಕಾರ್ಖಾನೆಗಳನ್ನು ಖಾಸಗೀಕರಣ ಮಾಡಲಾಗುತ್ತಿದೆ ಎಂದು ಸರ್ಕಾರದ ವಿರುದ್ಧ ಹನುಮಂತಯ್ಯ ಹರಿಹಾಯ್ದರು.

ಇವೆಲ್ಲಾ ವಿಷಯಗಳ ಮಧ್ಯೆ ಸಾಮಾಜಿಕ ನ್ಯಾಯದ ಅಡಿಯಲ್ಲಿ ನೀಡಲಾಗುತ್ತಿದ್ದ ಮೀಸಲಾತಿಯನ್ನು ಅಶಕ್ತಗೊಳಿಸುವ ಹುನ್ನಾರಕ್ಕೆ ಕೇಂದ್ರ ಸರಕಾರ ಮುಂದಾಗಿದೆ. ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೇ ಸಮಾಜದ ಮೇಲ್ಪಂಕ್ತಿಯ ಜನರು ಮೀಸಲಾತಿ ಹೋರಾಟ ನಡೆಸುತ್ತಿರುವುದು ವಿಪರ್ಯಾಸ. ಮೀಸಲಾತಿ ತನ್ನ ಅರ್ಥವನ್ನು ಇನ್ನು ಉಳಿಸಿಕೊಳ್ಳಬೇಕಾದರೆ ಎಲ್ಲಾ ಸಂಘಟನೆಗಳು ಒಗ್ಗಟ್ಟಿನಿಂದ ಹೋರಾಟ ಮಾಡುವ ಮೂಲಕ ಖಾಸಗೀಕರಣವನ್ನು ತಡೆಯಬೇಕು. ಉದ್ಯೋಗ ಭದ್ರತೆ ಇಲ್ಲದೆ ಸ್ವಾಭೀಮಾನಿ ಭಾರತ ಹೇಗೆ ಕಟ್ಟಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

'ದೇಶ ಪ್ರೇಮ, ದೇಶ ಭಕ್ತಿಯ ನಡುವಿನ ವ್ಯತ್ಯಾಸ ತಿಳಿಯಬೇಕಿದೆ'

ರಂಗಕರ್ಮಿ ಹಾಗೂ ಚಲನಚಿತ್ರ ನಿರ್ದೇಶಕ ಬಿ. ಸುರೇಶ್‌ ಮಾತನಾಡಿ, ದೇಶ ಭಕ್ತಿಯ ವಿಷಯವನ್ನು ಮುಂದೆ ತಂದು ಪ್ರಶ್ನೆ ಮಾಡುವುದನ್ನೇ ನಿಲ್ಲಿಸಲಾಗಿದೆ. ದೇಶ ಪ್ರೇಮ ಹಾಗೂ ದೇಶ ಭಕ್ತಿಯ ನಡುವೆ ಇರುವ ವ್ಯತ್ಯಾಸವನ್ನು ನಾವು ನಮ್ಮ ಯುವ ಪೀಳಿಗೆಗೆ ತಿಳಿಸಬೇಕಾಗಿದೆ. ದೇಶದಲ್ಲಿರುವ ಸಾರ್ವಜನಿಕ ಉದ್ಯಮಗಳ ಖಾಸಗೀಕರಣವನ್ನು ತಡೆಯುವುದು ದೇಶ ಪ್ರೇಮವೇ ಆಗಿದೆ. ರೈತರ ಚಳುವಳಿಯ ರೀತಿಯಲ್ಲಿ ದೇಶಾದ್ಯಂತ ಸಂಘಟಿತರಾಗಿ ಒಗ್ಗಟ್ಟಿನಿಂದ ಹೋರಾಟ ಮಾಡಬೇಕಾಗಿದೆ. ಸಾರ್ವಜನಿಕ ಉದ್ಯಮಗಳು ಖಾಸಗೀಕರಣ ಆದರೆ ಮುಂದಿನ ಪೀಳಿಗೆಗೆ ಕೆಲಸದ ಭದ್ರತೆ ಇರುವುದಿಲ್ಲ. ಈ ಹಿನ್ನಲೆಯಲ್ಲಿ ಎಲ್ಲಾ ವರ್ಗದ ಜನರನ್ನು ಸಂಘಟಿಸಬೇಕಾಗಿದೆ ಎಂದು ಹೇಳಿದರು.

ರೈತರು, ದಲಿತ ಸಂಘಟನೆಗಳು, ಕರ್ನಾಟಕ ದಲ್ಲಿರುವ ಕನ್ನಡಪರ ಹೋರಾಟಗಾರರು ಹಾಗೂ ಎಲ್ಲಾ ಸಾರ್ವಜನಿಕ ಉದ್ಯಮಗಳ ಕಾರ್ಮಿಕ ಸಂಘಟನೆಗಳು ಮೊಟ್ಟಮೊದಲ ಬಾರಿಗೆ ಒಂದು ವೇದಿಕೆಯಲ್ಲಿ ಜೊತೆಯಾಗಿವೆ. ಇದರ ಜೊತೆಯಲ್ಲಿಯೇ ಒಗ್ಗಟ್ಟಾಗಿ ಖಾಸಗೀಕರಣವನ್ನು ವಿರೋಧಿಸುವ ನಿರ್ಧಾರವನ್ನು ತಗೆದುಕೊಂಡಿವೆ.

ಈ ಹೋರಾಟಕ್ಕೆ ಕೈಜೋಡಿಸುವುದಾಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್‌, ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಕರ್ನಾಟಕ ಪ್ರಾಂತ್ಯ ರೈತ ಸಂಘದ ಅಧ್ಯಕ್ಷ ಜಿ.ಸಿ ಬಯ್ಯಾರೆಡ್ಡಿ, ಕೆ.ಪಿ.ಟಿ.ಸಿ.ಎಲ್‌ ಎಂಪ್ಲಾಯೀಸ್‌ ಯೂನಿಯನ್‌ ಕಾರ್ಯಾಧ್ಯಕ್ಷರಾದ ಆರ್‌.ಹೆಚ್‌ ಲಕ್ಷ್ಮೀಪತಿ, ದಲಿತ ಸಂಘರ್ಷ ಸಮಿತಿ (ಭೀಮವಾದ) ರಾಜ್ಯ ಸಂಚಾಲಕ ಮೋಹನ್‌ ರಾಜ್‌, ಕರ್ನಾಟಕ ರಣಧೀರ ಪಡೆಯ ಭೈರಪ್ಪ ಹರೀಶ್‌ ಕುಮಾರ್‌ ಅವರು ಭರವಸೆ ನೀಡಿದರು.

ಸಭೆಯಲ್ಲಿ ಬಿ ಇ ಎಂ ಎಲ್ ಕಾರ್ಮಿಕ ಸಂಘದ ಅಧ್ಯಕ್ಷ ಹಾಗೂ ವೇದಿಕೆಯ ಸಹ ಸಂಚಾಲಕರಾದ ದೊಮ್ಮಲೂರು ಶ್ರೀನಿವಾಸ ರೆಡ್ಡಿ, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್, ಪ್ರೊ ಟಿ ಆರ್ ಚಂದ್ರಶೇಖರ್, ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಕೆಪಿಟಿಸಿಎಲ್‌ ಎಂಪ್ಲಾಯೀಸ್‌ ಯೂನಿಯನ್‌ ಆರ್.‌ಹೆಚ್.‌ ಲಕ್ಷ್ಮಿಪತಿ, ಮೀನಾಕ್ಷಿ ಸುಂದರಂ, ಬಿಇಎಂಎಲ್ ಬೆಂಗಳೂರು, ಕೆಜಿಎಫ್, ಮೈಸೂರು, ಕೇಂದ್ರ ಕಚೇರಿಯ ಪದಾಧಿಕಾರಿಗಳು ಸೇರಿದಂತೆ ಹಲವು ಸಂಘಟನೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

Last Updated : Mar 2, 2021, 3:19 AM IST

ABOUT THE AUTHOR

...view details