ಬೆಂಗಳೂರು:ಪಿಎಸ್‌ಐ ನೇಮಕಾತಿ ಹಗರಣಕ್ಕೆ ಸಂಬಂಧಪಟ್ಟಂತೆ ಮತ್ತಷ್ಟು ಪೊಲೀಸರು ಬಂಧನವಾಗುವ ಸಾಧ್ಯತೆಗಳಿದ್ದು, 25ಕ್ಕೂ ಹೆಚ್ಚು ಪರೀಕ್ಷಾ ಕೇಂದ್ರಗಳ ಉಸ್ತುವಾರಿ ವಹಿಸಿದ್ದ ಡಿವೈಎಸ್‌ಪಿಗಳು ಹಾಗೂ ಕೆಳಹಂತದ ಅಧಿಕಾರಿಗಳಿಗೆ ಸಿಐಡಿ ನೋಟಿಸ್ ನೀಡಲಿದೆ ಎನ್ನಲಾಗುತ್ತಿದೆ.
ಹಗರಣ ಬಗೆದಷ್ಟೂ ಆಳಕ್ಕೆ ಹೋಗುತ್ತಿದ್ದು, ಒಂದಕ್ಕೊಂದು ಸರಣಿ ಸಂಪರ್ಕಗಳ ಮೂಲಕ ಬ್ರಹ್ಮಾಂಡ ದರ್ಶನವಾಗುತ್ತಿದೆ. ಹಗರಣಕ್ಕೆ ಸಂಬಂಧಿಸಿದಂತೆ ಕೆಲ ಹಿರಿಯ ಪೊಲೀಸ್ ಅಧಿಕಾರಿಗಳ ತಲೆದಂಡವಾಗುವ ಸಾಧ್ಯತೆ ಇದೆ. ಈವರೆಗೂ ಹಗರಣಕ್ಕೆ ಸಂಬಂಧಪಟ್ಟಂತೆ 47 ಮಂದಿಯನ್ನು ಬಂಧಿಸಲಾಗಿದೆ. ಇವರಲ್ಲಿ ಪರೀಕ್ಷಾ ಮೇಲ್ವಿಚಾರಕರು, ಮಧ್ಯಸ್ಥಿಕೆದಾರರು, ಕಿಂಗ್‌ಪಿನ್‌ಗಳು ಸೇರಿದ್ದಾರೆ.
ಪೊಲೀಸ್ ಇಲಾಖೆಯ ಅಧಿಕಾರಿಗಳಲ್ಲಿ ನಡುಕ:ಕಲಬುರಗಿಯಲ್ಲಿ ಈ ಮೊದಲು ಆರು ಮಂದಿಯನ್ನು ಬಂಧಿಸಲಾಗಿತ್ತು. ನಿನ್ನೆ ಒಬ್ಬ ಡಿವೈಎಸ್‌ಪಿ ಹಾಗೂ ಇನ್ಸ್ಪೆಕ್ಟರ್ರೊಬ್ಬರನ್ನು ಬಂಧಿಸಲಾಗಿದೆ. ಮತ್ತಿಬ್ಬರು ಪಿಎಸ್‌ಐಗಳು ಬಂಧನಕ್ಕೊಳಗಾಗಿದ್ದಾರೆ. ಒಟ್ಟು 10 ಮಂದಿ ಪೊಲೀಸರ ಬಂಧನವಾಗಿದೆ. ಈಗ ಹೊಸದಾಗಿ 25ಕ್ಕೂ ಕೇಂದ್ರಗಳ ಉಸ್ತುವಾರಿ ವಹಿಸಿದ್ದವರಿಗೆ ನೋಟಿಸ್ ನೀಡಲು ಮುಂದಾಗಿರುವುದು ಪೊಲೀಸ್ ಇಲಾಖೆಯ ಅಧಿಕಾರಿಗಳಲ್ಲಿ ನಡುಕ ಉಂಟು ಮಾಡಿದೆ.
ಓದಿ:ಪಿಎಸ್ಐ ನೇಮಕಾತಿ ಅಕ್ರಮ: ಬಂಧಿತ ಡಿವೈಎಸ್‌ಪಿ, ಇನ್ಸ್ಪೆಕ್ಟರ್ಗೆ 8 ದಿನ ಸಿಐಡಿ ಕಸ್ಟಡಿ
ಡಿವೈಎಸ್‌ಪಿ ನೇತೃತ್ವದಲ್ಲಿ ಉಸ್ತುವಾರಿ:ಪ್ರತಿ ಕೇಂದ್ರಕ್ಕೂ ಡಿವೈಎಸ್‌ಪಿ ನೇತೃತ್ವದಲ್ಲಿ ಉಸ್ತುವಾರಿಯನ್ನು ವಹಿಸಲಾಗಿತ್ತು. ಅಲ್ಲಿನ ಪರೀಕ್ಷಾ ಆಕ್ರಮಗಳ ತಡೆ, ಶಾಂತಿ ಕಾಪಾಡುವುದು ಹಾಗೂ ಪರೀಕ್ಷೆ ನಡೆಸುವುದು ಉಸ್ತುವಾರಿ ಅಧಿಕಾರಿಗಳ ಜವಾಬ್ದಾರಿಯಾಗಿತ್ತು.
ಒಟ್ಟು 92 ಕೇಂದ್ರಗಳಲ್ಲಿ ಪರೀಕ್ಷೆ: ಕಲಬುರಗಿಯ ಜ್ಞಾನಜ್ಯೋತಿ ಶಾಲೆಯ ಪರೀಕ್ಷಾ ಕೇಂದ್ರದಿಂದ ಶುರುವಾದ ಹಗರಣದ ಕಿಡಿ ಹೊತ್ತಿ ಉರಿಯುತ್ತಿದೆ. ಒಎಂಆರ್ ಶೀಟ್‌ನಲ್ಲಿ ವ್ಯತ್ಯಾಸ ಕಂಡು ಬಂದಿರುವುದರ ಹಿನ್ನೆಲೆ ಈವರೆಗೂ 14 ಮಂದಿಯನ್ನು ಬಂಧಿಸಲಾಗಿದೆ. ಒಟ್ಟು 92 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದ್ದು, ಅದರಲ್ಲಿ ಕಾಲು ಭಾಗಕ್ಕಿಂತಲೂ ಹೆಚ್ಚಿನ ಕೇಂದ್ರಗಳಲ್ಲಿ ಅವ್ಯವಹಾರದ ಸುಳಿವನ್ನು ಸಿಐಡಿ ಗುರುತಿಸಿದೆ.
ಅಧಿಕಾರಿಗಳಿಂದ ವಕೀಲರಿಗೆ ಮೊರೆ: ಸಿಐಡಿ ತಂಡಗಳು ಏಕಾಏಕಿ ಯಾವುದೇ ದುಡಿಕಿನ ನಿರ್ಧಾರ ತೆಗೆದುಕೊಳ್ಳದೇ ತಾಳ್ಮೆಯಿಂದ ಪರಿಶೀಲಿಸುತ್ತಿದ್ದಾರೆ. ಅಧಿಕಾರಿಗಳು ಪ್ರತಿ ಪ್ರಕರಣದಲ್ಲೂ ಖಚಿತ ಹಾಗೂ ಸ್ಪಷ್ಟ ಪುರಾವೆಗಳ ಪಡೆದು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಒಂದು ವೇಳೆ ಪೊಲೀಸ್ ಅಧಿಕಾರಿಗಳು ಅವ್ಯವಹಾರದಲ್ಲಿ ಭಾಗಿಯಾಗಿದ್ದರೆ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಆತಂಕದಿಂದ ಬಹಳಷ್ಟು ಮಂದಿ ವಕೀಲರಿಗೆ ಮೊರೆ ಹೋಗುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಓದಿ:ಪಿಎಸ್ಐ ನೇಮಕಾತಿ ಹಗರಣ: ಪ್ರಕರಣ ರದ್ದುಕೋರಿ ಹೈಕೋರ್ಟ್ ಮೆಟ್ಟಿಲೇರಿದ ಆರೋಪಿಗಳು
ನೇಮಕಾತಿ ವಿಭಾಗದ ಸಿಬ್ಬಂದಿಗಳ ವಿಚಾರಣೆ:ಪ್ರಮುಖವಾಗಿ ಪೊಲೀಸ್ ನೇಮಕಾತಿ ವಿಭಾಗದ ಕೇಂದ್ರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ವಿಚಾರಣೆ ಭರದಿಂದ ಸಾಗಿದ್ದು, ಮುಂದಿನ ದಿನಗಳಲ್ಲಿ ಡಿವೈಎಸ್‌ಪಿಗಳು ಹಾಗು ಕೆಳಹಂತದ ಅಧಿಕಾರಿಗಳಿಗೆ ಸಿಐಡಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡುವ ಸಾಧ್ಯತೆ ಹೆಚ್ಚಾಗಿದೆ.