ಬೆಂಗಳೂರು:ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್ಐ) ಪರೀಕ್ಷಾ ಮುಗಿದ ನಾಲ್ಕು ದಿನಗಳ ಅಂತರದಲ್ಲಿ ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತಕುಮಾರ್ ಸೇರಿ ನಾಲ್ವರಿದ್ದ ಪೊಲೀಸ್ ಸಿಬ್ಬಂದಿಯ ತಂಡವು ಸ್ಟ್ರಾಂಗ್ ರೂಮ್ ಒಳನುಗ್ಗಿ 22 ಒಎಂಆರ್ ಶೀಟ್ ತಿದ್ದುಪಡಿ ಮಾಡಿದ್ದಾರೆ ಎಂದು ಸಿಐಡಿ ಸಲ್ಲಿಸಿದ ಚಾರ್ಜ್ಶೀಟ್ನಲ್ಲಿ ಉಲ್ಲೇಖವಾಗಿದೆ.
ಬಂಧಿತ ಆರೋಪಿಗಳು ಮೂರು ಬಾರಿ ಪ್ರತ್ಯೇಕ ದಿನಗಳಲ್ಲಿ ಹೋಗಿ ಒಎಂಆರ್ ಶೀಟ್ ತಿದ್ದಿದ್ದಾರೆ. ಕಳೆದ ವರ್ಷ ಅಕ್ಟೋಬರ್ 7, 8 ಹಾಗೂ 16 ರಂದು ಬೆಳಗ್ಗೆ 6 ರಿಂದ 9.30 ವರೆಗೆ ಉತ್ತರಪತ್ರಿಕೆಗಳ ಟ್ಯಾಂಪರಿಂಗ್ ಕಾರ್ಯ ನಡೆದಿದೆ. 545 ಪಿಎಸ್ಐ ಹುದ್ದೆಗಳ ನೇಮಕಾತಿಗಾಗಿ ಕಳೆದ ವರ್ಷ ಅಕ್ಟೋಬರ್ 3 ರಂದು ಪೊಲೀಸ್ ಇಲಾಖೆಯು ಲಿಖಿತ ಪರೀಕ್ಷೆ ನಡೆಸಿತ್ತು. ಪರೀಕ್ಷೆ ಮುಗಿದ ನಂತರ ಉತ್ತರಪತ್ರಿಕೆಗಳನ್ನು ಬೆಂಗಳೂರಿನ ಸಿಐಡಿ ಪ್ರಧಾನ ಕಚೇರಿಯ ಸ್ಟ್ರಾಂಗ್ ರೂಮ್ನಲ್ಲಿ 'ಭದ್ರ'ವಾಗಿಡಲಾಗಿತ್ತು. ಇದರ ಉಸ್ತುವಾರಿಯನ್ನು ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್ ಪೌಲ್ ವಹಿಸಿದ್ದರು. ಹೀಗಾಗಿ ಸ್ಟ್ರಾಂಗ್ ರೂಮ್ ಕೀ ಅವರ ಅಧೀನದಲ್ಲಿತ್ತು.
ಆರೋಪಿಗಳ ಪೂರ್ವಸಂಚಿನಂತೆ ಪರೀಕ್ಷೆ ಮುಗಿದ ನಾಲ್ಕು ದಿನಗಳ ಬಳಿಕ ಅಂದರೆ ಅ.5ರಂದು ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತಕುಮಾರ್, ಪೌಲ್ ಅವರ ಕಚೇರಿಯ ಕೊಠಡಿಗೆ ಹೋಗಿ ಕಪಾಟಿನಲ್ಲಿದ್ದ ಸ್ಟ್ರಾಂಗ್ ರೂಮ್ ಬೀಗದ ಕೀ ತೆಗೆದುಕೊಂಡಿದ್ದಾರೆ. ಅಕ್ಟೋಬರ್ 6 ಮಹಾಲಯ ಅಮಾವಾಸ್ಯೆಯಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕ ರಜೆ ಇದ್ದುದರಿಂದ ಅ.7ರಂದು ಮುಂಜಾನೆ 6.30 ಕ್ಕೆ ಡಿವೈಎಸ್ಪಿ ಶಾಂತಕುಮಾರ್, ಎಫ್ ಡಿಎಗಳಾದ ಹರ್ಷ, ಶ್ರೀನಿವಾಸ್ ಹಾಗೂ ಕಾನ್ ಸ್ಟೇಬಲ್ ಶ್ರೀಧರ್ ಸಿಐಡಿ ಕಚೇರಿಗೆ ಹೋಗಿದ್ದರು.