ಬೆಂಗಳೂರು:ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಹೊರ ಬೀಳುತ್ತಿರುವ ದಾಖಲೆ, ಶಾಮೀಲಾದ ವ್ಯಕ್ತಿಗಳು, ಬಂಧಿತರಾದ ವ್ಯಕ್ತಿಗಳ ಹಿನ್ನೆಲೆಯೆಲ್ಲವೂ ಕಾಂಗ್ರೆಸ್ ಪ್ರಭಾವಿ ನಾಯಕರ ನಿಕಟ ಸಂಪರ್ಕವನ್ನು ಸೂಚಿಸುತ್ತಿದೆ. ಹಗರಣದಲ್ಲಿ ಸಿಕ್ಕಿ ಬೀಳುತ್ತಿರುವ ಆರೋಪಿಗಳೆಲ್ಲರೂ ಖರ್ಗೆ ಕುಟುಂಬದ ಮನೆಯ ಸುತ್ತ ಗಿರಕಿ ಹೊಡೆಯುವವರೇ ಆಗಿದ್ದಾರೆ. ಮಹಾಂತೇಶ್ ಪಾಟೀಲ್ ಹಾಗೂ ಅವರ ಸೋದರ ಖರ್ಗೆ ಕುಟುಂಬ ಹಾಗೂ ಕಾಂಗ್ರೆಸ್ ಜೊತೆಗೆ ಹೊಂದಿರುವ ಸಾಂಗತ್ಯದ ಬಗ್ಗೆ ಡಿಕೆಶಿ ಅವರು ಏಕೆ ಮೌನವಾಗಿದ್ದಾರೆ? ಎಂದು ಬಿಜೆಪಿ ಪ್ರಶ್ನಿಸಿದೆ.
ಪಿಎಸ್‌ಐ ನೇಮಕಾತಿ ಹಗರಣ ವಿಚಾರದಲ್ಲಿ ಕಾಂಗ್ರೆಸ್ ಇಷ್ಟು ದಿನ ʼಅಟೆನ್ಷನ್ ಡೈವರ್ಟ್ʼ ಮಾಡುವ ಕೆಲಸ ಮಾಡುತ್ತಿತ್ತು. ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಈ ಕೆಲಸದ ಗುತ್ತಿಗೆ ಪಡೆದವರಂತೆ ವರ್ತಿಸಿದರು. ಆದರೆ, ಈಗ ಹಗರಣದ ಬಾಲ ಇವರ ಕಾಲನ್ನೇ ಸುತ್ತಿಕೊಂಡಿದೆ. ಗಮನ ಬೇರೆಡೆ ಸೆಳೆಯಲು ಮಾಡಿದ ಕಾಂಗ್ರೆಸ್ ಪ್ರಯತ್ನವೆಲ್ಲವೂ ವ್ಯರ್ಥವಾಗಿದೆ ಎಂದು ಬಿಜೆಪಿ ಟ್ವೀಟ್ ಮೂಲಕ ಟೀಕಿಸಿದೆ.
ಪಿಎಸ್‌ಐ ನೇಮಕಾತಿ ಅಕ್ರಮದ ಬಗ್ಗೆ ಪ್ರಿಯಾಂಕ್ ಖರ್ಗೆ ಅವರ ಬಳಿ ಮಾಹಿತಿ, ದಾಖಲೆ ಇದ್ದರೆ ಅದನ್ನು ತನಿಖೆ ನಡೆಸುತ್ತಿರುವ ಪೊಲೀಸರಿಗೆ ಸಲ್ಲಿಸುವುದು ಅವರ ಕರ್ತವ್ಯ. ಈ ಕಾರಣಕ್ಕಾಗಿಯೇ ಪ್ರಿಯಾಂಕ್ ಅವರಿಗೆ ಸಿಐಡಿ ನೋಟಿಸ್ ನೀಡಿದೆ. ತನಿಖೆಗೆ ಸಹಕರಿಸುವುದನ್ನು ಬಿಟ್ಟು ನೋಟಿಸ್ ನೀಡಿರುವುದನ್ನು ರಾಜಕೀಯಗೊಳಿಸುವುದು ಸರಿಯಲ್ಲ.