ಬೆಂಗಳೂರು:ಖಾಲಿ ಇರುವ 1142 ಪಿಎಸ್ಐ ಹಾಗೂ ನಾಲ್ಕು ಸಾವಿರ Constable ಹುದ್ದೆಗಳನ್ನು ನಿಗದಿತ ಕಾಲಮಿತಿ ಒಳಗೆ ಭರ್ತಿ ಮಾಡುತ್ತೇವೆ ಎಂದು ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಭರವಸೆ ನೀಡಿದೆ.
ಪೊಲೀಸ್ ಇಲಾಖೆಯಲ್ಲಿ ಹುದ್ದೆಗಳು ಖಾಲಿ ಇರುವ ಕುರಿತು ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮಂಗಳವಾರ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಸರ್ಕಾರದ ಪರ ವಕೀಲರು ಪೀಠಕ್ಕೆ ಪ್ರಮಾಣಪತ್ರ ಸಲ್ಲಿಸಿ, ಖಾಲಿ ಹುದ್ದೆಗಳನ್ನು ನಿಗದಿತ ಕಾಲಮಿತಿಯೊಳಗೆ ಭರ್ತಿ ಮಾಡುವುದಾಗಿ ಭರವಸೆ ನೀಡಿದರು. ಹೇಳಿಕೆ ದಾಖಲಿಸಿಕೊಂಡ ಪೀಠ, ನಿಗದಿತ ಕಾಲಮಿತಿಯೊಳಗೆ ಖಾಲಿ ಹುದ್ದೆಗಳ ಭರ್ತಿ ಆಗಬೇಕು. ಈ ವಿಚಾರದಲ್ಲಿ ಸರ್ಕಾರದ ವತಿಯಿಂದ ಯಾವುದೇ ನಿರ್ಲಕ್ಷ್ಯ ಆಗದಂತೆ ನೋಡಿಕೊಳ್ಳಬೇಕು ಎಂದು ನಿರ್ದೇಶಿಸಿ ಅರ್ಜಿ ಇತ್ಯರ್ಥಪಡಿಸಿತು.
ಹಿಂದಿನ ವಿಚಾರಣೆ ವೇಳೆ 2022ರ ಜುಲೈ ತಿಂಗಳ ಅಂತ್ಯದ ವೇಳೆಗೆ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಸರ್ಕಾರ ತಿಳಿಸಿತ್ತು. ಆದರೆ, ಅದನ್ನು ಒಪ್ಪದ ಪೀಠ, ಖಾಲಿ ಹುದ್ದೆಗಳ ಭರ್ತಿಗೆ ಕನಿಷ್ಟ ಕಾಲಮಿತಿ ನಿಗದಿಪಡಿಸಬೇಕು. ಆ ಕುರಿತಂತೆ ಪ್ರಮಾಣಪತ್ರ ಸಲ್ಲಿಸಬೇಕು ಎಂದು ನಿರ್ದೇಶಿಸಿತ್ತು. ಅದರಂತೆ, ಹೊಸ ಪ್ರಮಾಣ ಪತ್ರ ಸಲ್ಲಿಸಿದ ಸರ್ಕಾರ, ನಿಗದಿತ ಕಾಲಮಿತಿಯೊಳಗೆ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಹೈಕೋರ್ಟ್‌ಗೆ ಭರವಸೆ ನೀಡಿದೆ.
(ಇದನ್ನೂ ಓದಿ: ರಾತ್ರೋರಾತ್ರಿ ಸ್ಟಾರ್ ಆದ ಹೀರೋಗೆ ಕೆಕೆಆರ್ ಮಣೆ... 20 ಲಕ್ಷದಿಂದ 8 ಕೋಟಿ ರೂ.ಗೆ ಅಯ್ಯರ್ ರಿಟೈನ್)