ಬೆಂಗಳೂರು: ಇತ್ತೀಚೆಗೆ ಪಿಎಸ್ಐ ಅಭ್ಯರ್ಥಿಗಳ ಆಯ್ಕೆಗೆ ನಡೆದ ಪರೀಕ್ಷೆಯಲ್ಲಿ ಭಾಗಿಯಾಗಿದ್ದ 15ಕ್ಕೂ ಹೆಚ್ಚು ಅಭ್ಯರ್ಥಿಗಳು ಇಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿದ್ದರು. ರಾಜ್ಯ ಸರ್ಕಾರ ನಡೆಸಿದ ಪಿಎಸ್ಐ ಪರೀಕ್ಷೆ ಸಾಕಷ್ಟು ದೊಡ್ಡ ವಿವಾದಕ್ಕೆ ಕಾರಣವಾಗಿದ್ದು, ಗೃಹ ಸಚಿವರು ಮರು ಪರೀಕ್ಷೆ ನಡೆಸುವುದಾಗಿ ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಪರೀಕ್ಷೆ ಬರೆದ ಕೆಲ ಅಭ್ಯರ್ಥಿಗಳು ಅತಂತ್ರ ಸ್ಥಿತಿ ಎದುರಿಸುತ್ತಿದ್ದು, ಸರ್ಕಾರದ ಮೇಲೆ ಒತ್ತಡ ಹೇರುವಂತೆ ಮನವಿ ಮಾಡಲು ಪ್ರತಿಪಕ್ಷ ನಾಯಕನನ್ನು ಭೇಟಿ ಮಾಡಿದ್ದಾರೆ.
ಪ್ರಾಮಾಣಿಕವಾಗಿ ಸಾಕಷ್ಟು ಮಂದಿ ಪರೀಕ್ಷೆ ಬರೆದಿದ್ದು, ಅವರ ಭವಿಷ್ಯ ಡೋಲಾಯಮಾನವಾಗಿದೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ. ಪ್ರಾಮಾಣಿಕರಿಗೆ ಸೇವೆಗೆ ಅವಕಾಶ ಸಿಗಲಿ ಎಂದು ಹಲವು ನಾಯಕರನ್ನು ಭೇಟಿಯಾಗಿ ಮನವೊಲಿಸಿ ತಮ್ಮ ಪರ ವಾದ ಮಂಡಿಸುವಂತೆ ಮನವಿ ಮಾಡುತ್ತಿದ್ದಾರೆ. ಇದರ ಭಾಗವಾಗಿಯೇ ಇಂದು ಕೆಲ ಅಭ್ಯರ್ಥಿಗಳು ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿದ್ದರು.
ಪ್ರತಿಭಟನೆ ಹಿನ್ನೆಲೆ ಭೇಟಿ:ಇಂದು ಪಿಎಸ್ಐ ಅಭ್ಯರ್ಥಿಗಳು ಪ್ರತಿಭಟನೆ ಮಾಡುತ್ತಿದ್ದಾರೆ. ಪ್ರತಿಭಟನೆ ಆರಂಭಿಸುವುದಕ್ಕೂ ಮುನ್ನ 15ರಿಂದ 20 ಮಂದಿ ಅಭ್ಯರ್ಥಿಗಳ ತಂಡ ಮನವಿ ಪತ್ರದೊಂದಿಗೆ ಸಿದ್ದರಾಮಯ್ಯ ನಿವಾಸಕ್ಕೆ ಆಗಮಿಸಿತ್ತು. ಇದೇ ತಂಡ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತ್ತು. ಎರಡು ಕಾರುಗಳಲ್ಲಿ ಆಗಮಿಸಿರುವ ಅಭ್ಯರ್ಥಿಗಳು ಸಿದ್ದರಾಮಯ್ಯ ನಿವಾಸಕ್ಕೆ ತೆರಳಿದ್ದು, ಅವರಿಗೆ ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.