ಬೆಂಗಳೂರು: ಮಾನವ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಟ್ ಬಂಧನ ಖಂಡಿಸಿ ನಗರದ ಟೌನ್ ಹಾಲ್ ಮುಂದೆ ಪ್ರಗತಿಪರ ಹಾಗೂ ವಿವಿಧ ಸಂಘಟನೆ ಮುಖಂಡರು ಪ್ರತಿಭಟನೆ ನಡೆಸಿದರು. ಸುಳ್ಳು ಆರೋಪ ಹೊರಿಸಿ ತೀಸ್ತಾ ಸೆಟಲ್ವಾಟ್ರನ್ನು ಗುಜರಾತ್ನ ಎಟಿಸಿ ಪೊಲೀಸರು ಬಂಧಿಸಿರುವುದು ಅಕ್ಷಮ್ಯ ಅಪರಾಧ. ಸೇಡಿನ ರಾಜಕಾರಣಕ್ಕಾಗಿ ಬಂಧಿಸಿರುವುದು ಸರಿಯಲ್ಲ ಎಂದು ಭಿತ್ತಪತ್ರ ಹಿಡಿದು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಂಧನವಾಗಿರುವ ತೀಸ್ತಾರನ್ನು ಕೂಡಲೇ ಬಿಡುಗಡೆಗೊಳಿಸುವಂತೆ ಒತ್ತಾಯಿಸಿದರು.
ಗುಜರಾತ್ ಗಲಭೆಯಲ್ಲಿ ಮೋದಿ ಬಳಗಕ್ಕೆ ಸುಪ್ರೀಂ ಕೋರ್ಟ್ ಕ್ಲೀನ್ ಚಿಟ್ ಕೊಟ್ಟ ಹಿನ್ನೆಲೆಯಲ್ಲಿ ಗೃಹ ಸಚಿವ ಅಮಿತ್ ಶಾ ಹಾಗೂ ಬಳಗ ಸೇಡಿನ ರಾಜಕಾರಣ ಪ್ರಾರಂಭಿಸಿದೆ. ಸುಳ್ಳು ಆರೋಪದ ಮೇಲೆ ತೀಸ್ತಾ ಅವರನ್ನು ವಿಚಾರಣೆ ಹೆಸರಲ್ಲಿ ಕಸ್ಟಡಿಗೆ ತೆಗೆದುಕೊಂಡಿದೆ. ಇದು ಘೋರ ಅನ್ಯಾಯ. ಸರ್ವಾಧಿಕಾರಿ ದಬ್ಬಾಳಿಕೆ ಎಂದು ಖಂಡಿಸಿದರು.