ಬೆಂಗಳೂರು :ಉತ್ತರ ಕನ್ನಡದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎಂಬ ಬೇಡಿಕೆ ಬಹಳ ವರ್ಷಗಳಿಂದ ಕೇಳಿ ಬರುತ್ತಿದೆ. ಆದರೆ ಶಿರೂರು ಟೋಲ್ಗೇಟ್ನಲ್ಲಿ ಆ್ಯಂಬುಲೆನ್ಸ್ ದುರ್ಘಟನೆಯ ಬಳಿಕ ಉತ್ತರ ಕನ್ನಡದಲ್ಲಿ ಆಸ್ಪತ್ರೆ ಬೇಕು ಎಂಬ ಒತ್ತಾಯ ಹೆಚ್ಚಾಗಿದೆ. ಶನಿವಾರ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಈ ಬಗ್ಗೆ ಹೋರಾಟ ನಡೆಯಿತು. ಆದರೆ ಈ ಹೋರಾಟಕ್ಕೆ ಯಾವುದೇ ಜನ ಪ್ರತಿನಿಧಿಗಳೂ ಸ್ಪಂದಿಸದಿರುವುದು ಬೇಸರದ ಸಂಗತಿಯಾಗಿದೆ.
ಈ ಪ್ರತಿಭಟನಾ ಸ್ಥಳಕ್ಕಾಗಮಿಸಿದ ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರು ಹೋರಾಟಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಜನರ ಕೂಗನ್ನು ನಿರ್ಲಕ್ಷಿಸುತ್ತಿರುವ ಶಾಸಕ ಮತ್ತು ಸಚಿವರ ವಿರುದ್ಧ ಕಿಡಿಕಾರಿದರು. ಉತ್ತರ ಕನ್ನಡ ಜಿಲ್ಲೆಯ ಶಾಸಕರು ತುಲಾಭಾರ ಮಾಡುವಷ್ಟು ದುಡ್ಡು ಮಾಡಿದ್ದಾರೆ. ಆದರೆ ಜನರಿಗೆ ಪ್ರಮುಖವಾಗಿ ಬೇಕಾಗಿರುವ ಆಸ್ಪತ್ರೆ ನಿರ್ಮಾಣದ ಬಗ್ಗೆ ಯಾರೂ ಗಮನ ನೀಡುತ್ತಿಲ್ಲ. ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರ ಜಿಲ್ಲೆಯಲ್ಲಿ ಆಸ್ಪತ್ರೆಗಾಗಿ ಬಂದು ಹೋರಾಟ ಮಾಡಬೇಕಾದ ದುಸ್ಥಿತಿ ನಿಮಾಣವಾಗಿರುವುದು ಬೇಸರದ ಸಂಗತಿ ಎಂದರು.
ಉತ್ತರ ಕನ್ನಡದ ಸಂಸದರಾಗಿಯೇ ಅನಂತ್ ಕುಮಾರ್ ಹೆಗಡೆ ಐದಾರು ಬಾರಿ ಆಯ್ಕೆಯಾಗಿದ್ದಾರೆ. ಆದರೆ ನಯಾ ಪೈಸೆಯೂ ಉಪಯೋಗವಾಗಿಲ್ಲ. ಪದೇ ಪದೇ ರಾಜ್ಯ ಸರ್ಕಾರವನ್ನು ಬೈಯುವ ಪರಿಸ್ಥಿತಿ ಬಂದಿದೆ. ಉತ್ತರ ಕನ್ನಡದಲ್ಲಿ ಜನರಿಗೇ ಬೇಕಾದ ರೀತಿ ಅಭಿವೃದ್ಧಿ ಮಾಡಿದ್ದರೆ ರಾಜಧಾನಿಗೆ ಉದ್ಯೋಗ ಅರಸಿ ಬರಬೇಕಾಗಿಲ್ಲ. ಆದರೆ ಜನಪ್ರತಿನಿಗಳು ಅಭಿವೃದ್ಧಿ ಬಗ್ಗೆ ತಲೆಕೆಡೆಸಿಕೊಳ್ಳುತ್ತಿಲ್ಲ. ಹೀಗಾಗಿ ಸರ್ಕಾರದ ವಿರುದ್ಧ ಹಾಗೂ ಜನರ ಪರ ಮಾತನಾಡಲೇಬೇಕಾದ ಅಗತ್ಯತೆ ಬಂದಿದೆ. ಬೇಸರವಾದರೂ ಜನರಿಗೆ ಧ್ವನಿ ಆಗುವುದರಲ್ಲಿ ನಾನು ಎಂದೂ ಹಿಂದೇಟು ಹಾಕುವುದಿಲ್ಲ ಎಂದು ಹೇಳಿದರು.