ಕರ್ನಾಟಕ

karnataka

ETV Bharat / city

ಸಿಇಟಿ ಫಲಿತಾಂಶ ಪ್ರಕಟ ಬೆನ್ನಲ್ಲೇ ಪುನರಾವರ್ತಿತ ವಿದ್ಯಾರ್ಥಿಗಳಿಂದ ಪ್ರತಿಭಟನೆ - Common Entrance Test

ಸಿಇಟಿ ಫಲಿತಾಂಶ ಪ್ರಕಟ ಬೆನ್ನಲ್ಲೇ ಪುನರಾವರ್ತಿತ ವಿದ್ಯಾರ್ಥಿಗಳು ಹಾಗೂ ಪಾಲಕರು ಕೆಇಎ ಎದುರು ಪ್ರತಿಭಟನೆ ನಡೆಸಿ ಅಸಮಾಧಾನ ವ್ಯಕ್ತಪಡಿಸಿದರು.

Protest by CET repeat students
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆದೇಶ ಪ್ರತಿ

By

Published : Jul 31, 2022, 12:12 PM IST

ಬೆಂಗಳೂರು: ಕಾಮನ್​ ಎಂಟ್ರೆನ್ಸ್​ ಟೆಸ್ಟ್ (ಸಿಇಟಿ) ಫಲಿತಾಂಶದಲ್ಲಿ ಪುನರಾವರ್ತಿತ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಹಾಗೂ ಪೋಷಕರು ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ)ದ ಎದುರು ಪ್ರತಿಭಟನೆ ನಡೆಸಿ, ಸೂಕ್ತ ಪರಿಹಾರ ಒದಗಿಸುವಂತೆ ಒತ್ತಾಯಿಸಿದರು.

ನಿನ್ನೆ ಬೆಳಗ್ಗೆ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್​ ನಾರಾಯಣ್ ಸಿಇಟಿ ಫಲಿತಾಂಶ ಪ್ರಕಟಿಸಿದ್ದರು. ಇದಾದ ಕೆಲವೇ ಸಮಯಕ್ಕೆ ಸಿಇಟಿ ಕೇಂದ್ರಕ್ಕೆ ಆಗಮಿಸಿದ ಪುನರಾವರ್ತಿತ ವಿದ್ಯಾರ್ಥಿಗಳು ಹಾಗೂ ಪೋಷಕರು ಪ್ರತಿಭಟನೆ ನಡೆಸಿ, ಆಕ್ರೋಶ ಹೊರ ಹಾಕಿದ್ದಾರೆ.

ಪ್ರತಿ ವರ್ಷ ಸಿಇಟಿ ಅಂಕಗಳ ಜತೆಗೆ ಪಿಯು ಅಂಕಗಳನ್ನು ಸೇರಿಸಿ ಫಲಿತಾಂಶ ನೀಡಲಾಗುತ್ತಿತ್ತು. ಆದರೆ, ಕಳೆದ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಪಿಯು ಪರೀಕ್ಷೆ ರದ್ದಾಗಿದ್ದು, ಸಿಇಟಿ ಪರೀಕ್ಷೆಯ ಅಂಕವನ್ನು ಮಾತ್ರ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಇನ್ನುಳಿದಂತೆ, ಈ ಬಾರಿಯ ವಿದ್ಯಾರ್ಥಿಗಳಿಗೆ ಪಿಯು ಮತ್ತು ಸಿಇಟಿ ಮಾರ್ಕ್ಸ್ ಸೇರಿಸಿ ಕೆಇಎ ಫಲಿತಾಂಶ ನೀಡಿದೆ ಎಂದು ಆರೋಪಿಸಿದರು.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆದೇಶ ಪ್ರತಿ

ಸಿಬಿಎಸ್‌ಇ ಹಾಗೂ ಪಿಯು ವಿದ್ಯಾರ್ಥಿಗಳ ಎರಡು ಅಂಕ ಗಣನೆಗೆ ತೆಗೆದುಕೊಂಡಿರುವ ಕೆಇಎ, ಕಳೆದ ವರ್ಷ ರಿಪೀಟ‌ರ್ ವಿದ್ಯಾರ್ಥಿಗಳ ಸಿಇಟಿ ಅಂಕ ಮಾತ್ರ ಗಣನೆಗೆ ತೆಗೆದುಕೊಂಡಿದೆ. ಹೀಗಾಗಿ, ಕಳೆದ ಬಾರಿ 90 ಅಂಕ ಪಡೆದವರಿಗೂ 15000 ಒಳಗೆ ರ‍್ಯಾಂಕಿಂಗ್‌ ದೊರೆತಿತ್ತು. ಆದರೆ ಈ ಬಾರಿ 98 ಅಂಕ ಪಡೆದಿದ್ದರೂ 1 ಲಕ್ಷದ ಮೇಲೆ ರ‍್ಯಾಂಕಿಂಗ್‌ ದೊರೆತಿದೆ. ಹಾಗಾಗಿ, ಕೂಡಲೇ ಸಮಸ್ಯೆ ಬಗೆಹರಿಸಬೇಕು ಎಂದು ಕೆಇಎ ಮುಂದೆ ಜಮಾವಣೆಗೊಂಡಿರುವ ಪೋಷಕರು ಹಾಗೂ ಪುನರಾವರ್ತಿತ ವಿದ್ಯಾರ್ಥಿಗಳು ಆಗ್ರಹಿಸಿದರು.

ಈ ಕುರಿತು ಸ್ಪಷ್ಟನೆ ನೀಡಿರುವ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯ, "ಯಾವುದೇ ವಿದ್ಯಾರ್ಥಿಗಳಿಗೆ ನಾವು ಅನ್ಯಾಯ ಮಾಡಿಲ್ಲ. 2020ರಲ್ಲಿ ಕೊರೊನಾ ಹಿನ್ನೆಲೆಯಲ್ಲಿ ಪಿಯುಸಿ ಪರೀಕ್ಷೆ ನಡೆದಿರಲಿಲ್ಲ. ಹೀಗಾಗಿ, ಸಿಇಟಿ ಅಂಕದ ಆಧಾರದಲ್ಲಿ ರ‍್ಯಾಂಕ್ ನೀಡಲಾಗಿತ್ತು. ಆದರೆ, ಈ ಬಾರಿ ಪಿಯುಸಿ ಪರೀಕ್ಷೆ ನಡೆದಿದೆ. ಹೀಗಾಗಿ, ಸಿಇಟಿ ಶೇ. 50 ಅಂಕ ಮತ್ತು ಪಿಯುಸಿ ಶೇ. 50 ಪಡೆಯಲಾಗಿದೆ. 2020 ರ ವಿದ್ಯಾರ್ಥಿಗಳು ಈ ವರ್ಷ ಪರೀಕ್ಷೆ ಬರೆದಿದ್ದಾರೆ. 2020ರ ನಿಯಮದಂತೆ ಸಿಇಟಿ ಅಂಕ ಮಾತ್ರ ಪಡೆದು ರಾಂಕ್ ನೀಡಲಾಗಿದೆ. ಪ್ರತಿ ವರ್ಷ ರಿಪೀಟರ್ಸ್ ಆಗಿ 2-3 ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದರು. ಆದರೆ, ಈ ಬಾ 23 ಸಾವಿರ ವಿದ್ಯಾರ್ಥಿಗಳು ಪುನಃ ಪರೀಕ್ಷೆ ಬರೆದಿದ್ದಾರೆ. ಅವರಿಗೆ ಪಿಯುಸಿ ಅಂಕ ಪಡೆದು ರ‍್ಯಾಂಕ್ ಕೊಟ್ಟರೆ ಇಡೀ ವ್ಯವಸ್ಥೆ ಗೊಂದಲ ಆಗುತ್ತದೆ. 2020ರ ವಿದ್ಯಾರ್ಥಿಗಳಿಗೆ ಯಾವ ನಿಯಮ ಪಾಲನೆ ಮಾಡಲಾಗಿದೆಯೋ ಅದೇ ನಿಯಮ ರಿಪೀಟರ್ಸ್‌ಗೆ ಪಾಲನೆ ಮಾಡಲಾಗಿದೆ" ಎಂದರು.

ಹೊಸ ಆದೇಶ: ಈ ಮಧ್ಯೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೂತನ ಟಿಪ್ಪಣೆ ಹೊರಡಿಸಿದ್ದು, ಸರ್ಕಾರದ ಆದೇಶ ಸಂಖ್ಯೆ: ಇಡಿ/147/ಟಿ.ಇ.ಸಿ/2020 ಮತ್ತು ದಿನಾಂಕ:01/09/2021 ರ ಪ್ರಕಾರ, 2021ರ ವಿದ್ಯಾರ್ಥಿಗಳ ಅರ್ಹತಾ ಅಂಕಗಳನ್ನು 2021-22ರ ಶೈಕ್ಷಣಿಕ ವರ್ಷಕ್ಕೆ ಸಿ.ಇ.ಟಿ ರ‍್ಯಾಂಕಿಂಗ್​ಗೆ ಪರಿಗಣಿಸಲಾಗಿಲ್ಲ ಮತ್ತು 2022-23ಕ್ಕೂ ಪರಿಗಣಿಸಲಾಗುವುದಿಲ್ಲ ಎಂದಿದೆ.

ಇದನ್ನೂ ಓದಿ:ಸಿಇಟಿ ಫಲಿತಾಂಶ: ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಮಾಧ್ಯಮಗೋಷ್ಠಿ

ABOUT THE AUTHOR

...view details