ಬೆಂಗಳೂರು: ರಾಷ್ಟ್ರೀಕೃತ ಬ್ಯಾಂಕ್‌ಗಳ ಖಾಸಗೀಕರಣ ನಿಲ್ಲಿಸುವಂತೆ ಬ್ಯಾಂಕ್ ಸಂಘಟನೆಗಳ ಐಕ್ಯ ವೇದಿಕೆಯಿಂದ ದೇಶಾದ್ಯಂತ ಇಂದು ಮತ್ತು ನಾಳೆ ಮೈಸೂರು ಬ್ಯಾಂಕ್ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ಐಕ್ಯ ವೇದಿಕೆಯ ರಾಜ್ಯ ಸಂಚಾಲಕ ಶ್ರೀನಿವಾಸ್ ಹೇಳಿದ್ದಾರೆ. ಈ ಹಿನ್ನೆಲೆ ರಾಷ್ಟ್ರೀಕೃತ ಬ್ಯಾಂಕ್ ಗಳ ಸೇವೆಗಳಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.
ಪ್ರೆಸ್‌ಕ್ಲಬ್‌ನಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಶ್ರೀನಿವಾಸ್, ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಖಾಸಗೀಕರಣ, ಜೀವ ವಿಮಾ ನಿಗಮದಲ್ಲಿನ ಬಂಡವಾಳ ಹಿಂತೆಗೆತ, ವಿಮಾ ಕಂಪನಿಯ ಖಾಸಗೀಕರಣ, ವಿಮಾ ಕ್ಷೇತ್ರದಲ್ಲಿ ಶೇ. 74 ವಿದೇಶಿ ಬಂಡವಾಳ ಹೂಡಿಕೆ ಮುಂತಾದ ಕೇಂದ್ರ ಸರ್ಕಾರದ ಕ್ರಮಗಳಿಂದ ಬ್ಯಾಂಕಿಂಗ್ ಮೇಲೆ ಪ್ರತಿಕೂಲ ಪರಿಣಾಮವಾಗಲಿದೆ ಎಂದು ಶ್ರೀನಿವಾಸ್ ತಿಳಿಸಿದರು.
ಸರ್ಕಾರ ದೊಡ್ಡ ಸಾಲಗಾರರ ಬಾಕಿ ವಸೂಲಿಗೆ ದಿಟ್ಟ ಪ್ರಯತ್ನ ನಡೆಸುವುದರ ಬದಲಾಗಿ ಬ್ಯಾಂಕ್‌ಗಳನ್ನೇ ಇಂತವರಿಗೆ ಮಾರಾಟ ಮಾಡಿ ಸಾರ್ವಜನಿಕ ಆಸ್ತಿಗಳ ಲೂಟಿಗೆ ಅವಕಾಶ ನೀಡುತ್ತಿದೆ. ಬ್ಯಾಂಕ್‌ಗಳ ಖಾಸಗೀಕರಣದಿಂದ ದೇಶದ ಜನರ ಉಳಿತಾಯ ಲೂಟಿ ಆಗಲಿದೆ. ಠೇವಣಿದಾರರ ಹಿತಾಸಕ್ತಿಗೆ ಧಕ್ಕೆ ಆಗಲಿದೆ. ಇದರ ಜೊತೆಗೆ ಉದ್ಯೋಗವಕಾಶ ಮತ್ತು ಮೀಸಲಾತಿಯ ಅವಕಾಶ ಕಡಿಮೆ ಆಗಲಿದೆ. ಬ್ಯಾಂಕ್‌ಗಳ ಶಾಖೆಗಳು ಕಡಿಮೆ ಆಗಲಿದ್ದು, ಜನಸಾಮಾನ್ಯರು ಬ್ಯಾಂಕಿಂಗ್ ಸೇವೆಗಳಿಂದ ವಂಚಿತರಾಗಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ದೇಶದಲ್ಲಿ ಈ ಹಿಂದೆಯೂ ಖಾಸಗಿ ಬ್ಯಾಂಕ್‌ಗಳು ವಿಫಲವಾದ ಸಾಕಷ್ಟು ಉದಾಹರಣೆಗಳಿವೆ. 1923 ರಿಂದ 1968 ರ ಅವಧಿಯಲ್ಲಿ 2,132 ಬ್ಯಾಂಕ್‌ಗಳು ವಿಫಲವಾಗಿದ್ದು, ಈ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳನ್ನು ರಾಷ್ಟ್ರೀಕರಣಗೊಳಿಸಲಾಗಿತ್ತು. ಈಗಲೂ ಖಾಸಗಿ ಬ್ಯಾಂಕ್‌ಗಳು ವಿಫಲವಾಗುತ್ತಿದ್ದರೂ ಸರ್ಕಾರ ಮತ್ತೆ ಬ್ಯಾಂಕ್‌ಗಳ ಖಾಸಗೀಕರಣಕ್ಕೆ ಮುಂದಾಗಿರುವುದು ಖಂಡನೀಯ ಎಂದು ಶ್ರೀನಿವಾಸ್ ಹೇಳಿದರು.