ದೊಡ್ಡಬಳ್ಳಾಪುರ(ಬೆಂಗಳೂರು ಗ್ರಾಮಾಂತರ): ಆಸ್ತಿ ವಿವಾದಲ್ಲಿ ವ್ಯಕ್ತಿಯೋರ್ವನಿಗೆ ಸಂಬಂಧಿಗಳೇ ಪೆಟ್ರೋಲ್ ಸುರಿದು ಹತ್ಯೆಗೆ ಯತ್ನಿಸಿದ ಭಯಾನಕ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಮಾಕಳಿ ಗ್ರಾಮದಲ್ಲಿ ಘಟನೆ ನಡೆದಿದೆ. 4 ಎಕರೆ 38 ಗುಂಟೆ ಜಮೀನು ವ್ಯಾಜ್ಯ ಕೋರ್ಟ್ನಲ್ಲಿ ಇರುವಾಗಲೇ ಈ ರೀತಿ ಕೃತ್ಯ ಎಸಗಲಾಗಿದೆ. ಜಮೀನು ಕೆಲಸ ಮುಗಿಸಿ ಬರುತ್ತಿದ್ದ ಅಣ್ಣನ ಮಕ್ಕಳು ಚಿಕ್ಕಪ್ಪ ರಾಮಯ್ಯ (65) ಎಂಬಾತನ ಮೇಲೆ ಪೆಟ್ರೋಲ್ ಹಾಕಿ ಹತ್ಯೆಮಾಡಲು ಯತ್ನಿಸಿದ್ದಾರೆ.
ಚಿಕ್ಕವೆಂಕಟರಮಣಪ್ಪ, ರಾಮಯ್ಯ, ಮುನಿಯಪ್ಪ ಎಂಬ ಮೂವರು ಸಹೋದರು. ಇವರಿಗೆ 4 ಎಕರೆ 38 ಗುಂಟೆ ಜಮೀನು ಇದ್ದು, ಮೂವರು ಅಣ್ಣತಮ್ಮಂದಿರ ಹೆಸರಿನಲ್ಲಿ ಸರ್ಕಾರದಿಂದ ಜಮೀನು ಮಂಜೂರಾಗಿ ಜಂಟಿ ಖಾತೆಯಾಗಿದೆ. ಆದರೆ ಅಣ್ಣನಾದ ಚಿಕ್ಕವೆಂಕಟರಮಣಪ್ಪ ಮತ್ತು ಆತನ ಮಕ್ಕಳು ಇಡೀ ಜಮೀನು ತಮಗೆ ಸೇರಿದೆ ಎಂದು ಹಠ ಮಾಡುತ್ತಿದ್ದು, ಈ ಸಂಬಂಧ ವ್ಯಾಜ್ಯ ಕೋರ್ಟ್ನಲ್ಲಿದೆ.
ಜಮೀನಿನ ಗಲಾಟೆ.. ಚಿಕ್ಕಪ್ಪನ ಮೇಲೆ ಪೆಟ್ರೋಲ್ ಸುರಿದು ಹತ್ಯೆಗೆ ಯತ್ನಿಸಿದ ಕಿರಾತಕರು ಇದೇ ವಿಚಾರಕ್ಕೆ ಮೂವರು ಅಣ್ಣ-ತಮ್ಮಂದಿರ ನಡುವೆ ಮೊದಲಿನಿಂದಲೂ ಜಗಳವಾಗುತ್ತಲೇ ಇತ್ತು. ಮಂಗಳವಾರ ಸಂಜೆ ರಾಮಯ್ಯ ಟ್ರ್ಯಾಕ್ಟರ್ ನಲ್ಲಿ ತನ್ನ ಪಾಲಿನ ಜಮೀನಿನಲ್ಲಿ ಉಳುಮೆ ಮಾಡಲು ಹೋದಾಗ ಆತನ ಅಣ್ಣನ ಮಗ, ಆತನ ಹೆಂಡತಿ ನರಸಮ್ಮ, ಮಗ ಗೋವಿಂದರಾಜು ಸಂಬಂಧಿಗಳಾದ ನಾಗೇಶ್, ದಿಲೀಪ್ ಎಂಬುವರು ರಾಮಯ್ಯನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಇಟ್ಟಿದ್ದಾರೆ. ತಡೆಯಲು ಹೋದ ರಾಮಯ್ಯನ ಮಗನ ಮೇಲೂ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಸುಟ್ಟ ಗಾಯಗಳಿಂದ ನರಳುತ್ತಿರುವ ರಾಮಯ್ಯನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದ್ದು, ಆತನ ಸ್ಥಿತಿ ಚಿತಾಂಜನಕವಾಗಿದೆ ಎಂದು ತಿಳಿದುಬಂದಿದೆ. ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆಯೋಪಿಗಳಾದ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ:ಬೆಂಗಳೂರಿನ ಐತಿಹಾಸಿಕ ದೊಡ್ಡ ಆಲದಮರದ ಬೃಹತ್ ಭಾಗ ಧರಾಶಾಹಿ